ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್‌ಗಳು ಮತ್ತು ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡಿದ್ದು ಬೆಂಗಳೂರು ಪೊಲೀಸರಿಗೆ ಒಂಬತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ 35 ವರ್ಷದ ರೌಡಿಶೀಟರ್ ಅನ್ನು ಬಂಧಿಸಲು ಸಹಾಯ ಮಾಡಿದೆ.
ಮೊಹಮ್ಮದ್ ಫಾರೂಕ್ ಎಂಬಾತನ ವಿರುದ್ಧ ಕೊಲೆ ಯತ್ನ ಸೇರಿದಂತೆ ಏಳು ಪ್ರಕರಣಗಳಿದ್ದು, ಒಂಬತ್ತು ವರ್ಷ ಈತ ಬಂಧನದಿಂದ ತಪ್ಪಿಸಿಕೊಂಡಿದ್ದ. ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಆಗಿದ್ದ ಫಾರೂಕ್ 2012ರಲ್ಲಿ ಅಪರಾಧ ಕೃತ್ಯ ಎಸಗಿದ್ದು, 2016ರವರೆಗೂ ಭೂಗತನಾಗಿದ್ದ.
ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP) ನಲ್ಲಿರುವ ಅವರ ಸೋದರ ಮಾವ ಸೇರಿದಂತೆ ಫಾರೂಕ್ ಅವರ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಲಾಯಿತು. ಆದರೆ, ಆತನ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಆತನ ಪತ್ನಿ ರೌಡಿಶೀಟರ್ ಜಾನಿ ಎಂಬಾತನ ಸಹೋದರಿಯಾಗಿದ್ದಾರೆ. ಪೊಲೀಸರು ಜಾನಿಯನ್ನು ವಿಚಾರಣೆಗೊಳಪಡಿಸಿದರೂ, ಫಾರೂಕ್ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿರಲಿಲ್ಲ.
ಬಳಿಕ ಇನ್‌ಸ್ಟಾಗ್ರಾಂನಲ್ಲಿ ವಿಧಾನಸೌಧದ ಮುಂಭಾಗ ನಿಂತಿರುವ ಫಾರೂಕ್ ಫೋಟೊವನ್ನು ಹಂಚಿಕೊಳ್ಳಲಾಗಿತ್ತು. ಇದನ್ನು ನೋಡಿದ ಮಾಹಿತಿದಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತನಿಖೆಯ ವೇಳೆ ಫಾರೂಕ್ ತನ್ನ ಮಗನ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆಯನ್ನು ಹೊಂದಿರುವುದು ಪತ್ತೆಯಾಗಿದೆ. ಪೊಲೀಸರು ಐಪಿ ವಿಳಾಸವನ್ನು ತೆಗೆದುಕೊಂಡಾಗ ಫಾರೂಕ್‌ನ ಮೊಬೈಲ್ ಸಂಖ್ಯೆ ತಿಳಿದುಬಂದಿದೆ. ಟವರ್ ಆಧರಿಸಿ ಆತ ಕನಕಪುರ ರಸ್ತೆಯ ದೊಡ್ಡಕಲ್ಲಸಂದ್ರದಲ್ಲಿ ವಾಸವಾಗಿರುವುದು ಪೊಲೀಸರಿಗೆ ತಿಳಿದಿದೆ. ಇದು ಆತನ ನಿಖರವಾದ ಸ್ಥಳವನ್ನು ಕಂಡುಹಿಡಿಯಲು ನೆರವಾಗದ ಕಾರಣ, ಆ ಮೊಬೈಲ್ ಫೋನ್ ಸಂಖ್ಯೆಯಿಂದ ಯಾವುದಾದರೂ ಬುಕಿಂಗ್ ಆಗಿದೆಯೇ ಎಂಬುದನ್ನು ಕಂಡುಹಿಡಿಯಲು ಆನ್‌ಲೈನ್ ಫುಡ್ ಅಗ್ರಿಗೇಟರ್‌ಗಳನ್ನು ಸಂಪರ್ಕಿಸಿದ್ದಾರೆ. ಇದು ಫಾರೂಕ್ ನಿವಾಸದ ವಿಳಾಸವನ್ನು ಬಹಿರಂಗಪಡಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫಾರೂಕ್ ತನ್ನ ಮಗುವನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರುತ್ತಿದ್ದಾಗ ಆತನನ್ನು ಬಂಧಿಸಲಾಗಿದೆ.
ಫಾರೂಕ್, ತನ್ನ ಹೆಂಡತಿ ಮತ್ತು ಮಗುವಿನೊಂದಿಗೆ ದುಬಾರಿ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದ. ಆತ 2016ರಲ್ಲಿ ಎಲ್ಲ ಅಪರಾಧ ಚಟುವಟಿಕೆಗಳನ್ನು ನಿಲ್ಲಿಸಿದ್ದನು ಮತ್ತು ಕಾರ್ ಡೀಲರ್ ಆಗಿ ಕೆಲಸ ಮಾಡುತ್ತಿದ್ದ. ಬಂಧನದ ಭೀತಿಯಿಂದ ಆತ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿಯೂ ಭಾಗವಹಿಸಲಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.