ಬೆಂಗಳೂರು: ಚಲಿಸುತ್ತಿದ್ದ ಕಾರಿನ ಮೇಲೆ ನಿಂತು ಸಾಹಸ ಪ್ರದರ್ಶಿಸಿದ ಆರೋಪದ ಮೇರೆಗೆ ಟ್ಯಾಕ್ಸಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಚಲಿಸುತ್ತಿದ್ದ ಸೆಡಾನ್ ಕಾರಿನ ಹಿಂಭಾಗದ ಕ್ರ್ಯಾಶ್ ಗಾರ್ಡ್ ಮೇಲೆ ನಿಂತು ಇಬ್ಬರು ವ್ಯಕ್ತಿಗಳು ಸಾಹಸ ಪ್ರದರ್ಶನ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಟ್ಯಾಕ್ಸಿ ಚಾಲರನ ವಿರುದ್ಧ ಪ್ರಕರಣ ದಾಖಲಾಗಿದೆ. ವೈರಲ್ ಆದ ವೀಡಿಯೊವನ್ನು ಆಧರಿಸಿ, ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಕಾರು ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ವಿಡಿಯೋದಲ್ಲಿರುವಂತೆ ಇಬ್ಬರು ವ್ಯಕ್ತಿಗಳು ಸುಮಾರು ಒಂದು ಕಿಲೋಮೀಟರ್ ದೂರ ಕಾರಿನ ಕ್ರ್ಯಾಶ್ ಗಾರ್ಡ್ ಮೇಲೆ ನಿಂತು ಪ್ರಯಾಣಿಸಿದ್ದರು. ಫೆಬ್ರವರಿ 8 ರಂದು ಬೆಳಿಗ್ಗೆ 10.30 ರಿಂದ 10.45 ರ ನಡುವೆ ಗೊರಗುಂಟೆಪಾಳ್ಯದಿಂದ ಸುಮನಹಳ್ಳಿ ಬಳಿಯ ನಾಯಂಡಹಳ್ಳಿ ಕಡೆಗೆ ಹೊರ ವರ್ತುಲ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಘಟನೆಯ ವಿಡಿಯೋ ತೆಗೆದ ದ್ವಿಚಕ್ರ ವಾಹನ ಚಾಲಕನೊಬ್ಬ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ನಗರ ಸಂಚಾರ ಪೊಲೀಸರಿಗೆ ಟ್ಯಾಗ್ ಮಾಡಿದ್ದ.
ಇದೀಗ ಕಾರಿನ ನೋಂದಣಿ ಸಂಖ್ಯೆಯನ್ನು ಆಧರಿಸಿ, ಪೊಲೀಸರು ಚಾಲಕ ಮತ್ತು ಇತರ ಇಬ್ಬರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಯಾದಗಿರಿ ಮೂಲದ ಕರಿಯ ಮಾನಪ್ಪ (21) ಎಂಬ ಚಾಲಕನನ್ನು ಬಂಧಿಸಿ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಕಾರಿನ ಕ್ರ್ಯಾಶ್ ಗಾರ್ಡ್ ಮೇಲೆ ನಿಂತಿದ್ದ ಇಬ್ಬರು ಆತನ ಸ್ನೇಹಿತರು ಎಂದು ಚಾಲಕ ಹೇಳಿಕೆ ನೀಡಿದ್ದಾನೆ. ಅಲ್ಲದೆ ವಾಹನದ ಎಲ್ಲಾ ದಾಖಲೆಗಳು ಹಾಗೆಯೇ ಇದ್ದ ಕಾರಣ ಕಾರು ಮಾಲೀಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
"ಚಾಲಕನ ಮೇಲೆ ಮಾತ್ರ ಪ್ರಕರಣ ದಾಖಲಿಸಲಾಗಿದ್ದು, ಕ್ರ್ಯಾಶ್ ಗಾರ್ಡ್‌ನಲ್ಲಿ ನಿಂತಿದ್ದ ಇತರ ಇಬ್ಬರನ್ನು ಎಚ್ಚರಿಸಿ ಬಿಡುಗಡೆ ಮಾಡಲಾಯಿತು. ವಿಚಾರಣೆ ವೇಳೆ ಅವರು ಮೋಜಿಗಾಗಿ ಹಾಗೆ ಮಾಡಿದ್ದಾರೆಂದು ಹೇಳಿಕೊಂಡಿದ್ದಾರೆ. ಮಂಗಳವಾರ ಎಫ್‌ಐಆರ್ ದಾಖಲಿಸಲಾಯಿತು ಮತ್ತು ಮರುದಿನ, ಮೂವರನ್ನೂ ಪತ್ತೆಹಚ್ಚಲಾಯಿತು. ಸಾರ್ವಜನಿಕ ರಸ್ತೆಯಲ್ಲಿ ಅತಿವೇಗದ ಚಾಲನೆ (ಬಿಎನ್‌ಎಸ್ 281) ಮತ್ತು ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡಿದ್ದಕ್ಕಾಗಿ (ಬಿಎನ್‌ಎಸ್ 125) ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.