ಬೆಂಗಳೂರು: ಅತಿಯಾದ ಜಾಹೀರಾತುಗಳನ್ನು ಪ್ರಸಾರ ಮಾಡುವ ಮೂಲಕ ಸಿನಿಮಾ ಪ್ರದರ್ಶನವನ್ನು ವಿಳಂಬಗೊಳಿಸಿದ ಕಾರಣಕ್ಕೆ PVR INOX ಗೆ ಇಲ್ಲಿನ ಜಿಲ್ಲಾ ಗ್ರಾಹಕ ನ್ಯಾಯಾಲಯ ದಂಡ ವಿಧಿಸಿದ್ದು, ಇದು 'ಅನ್ಯಾಯ'ದ ವ್ಯಾಪಾರದ ಅಭ್ಯಾಸ ಎಂದಿದೆ.
ಜಾಹೀರಾತುಗಳನ್ನು ಪ್ರಸಾರ ಮಾಡಿದ ತಪ್ಪಿಗೆ ನ್ಯಾಯಾಲಯವು ಮಲ್ಟಿಪ್ಲೆಕ್ಸ್‌ಗೆ ಒಂದು ಲಕ್ಷ ರೂಪಾಯಿ ದಂಡ ಪಾವತಿಸಲು ಮತ್ತು ಯಾವುದೇ ಚಿತ್ರಗಳು ಪ್ರಾರಂಭವಾಗುವ ನಿಖರ ಸಮಯ ಎಷ್ಟೆಂದು ವೀಕ್ಷಕರಿಗೆ ಸ್ಪಷ್ಟವಾಗಿ ತಿಳಿಸುವಂತೆ ಸೂಚಿಸಿದೆ.
2023ರ ಡಿಸೆಂಬರ್ 'ಸ್ಯಾಮ್ ಬಹದ್ದೂರ್' ಸಿನಿಮಾ ಶೋಗೆ ಇಬ್ಬರು ಕುಟುಂಬ ಸದಸ್ಯರೊಂದಿಗೆ ಬೆಂಗಳೂರಿನ ನಿವಾಸಿಯೊಬ್ಬರು ಹಾಜರಾಗಿದ್ದರು. ಟಿಕೆಟ್ ಪಡೆದಿದ್ದರಂತೆ ಸಿನಿಮಾ ಸಂಜೆ 4.05ಕ್ಕೆ ಆರಂಭವಾಗಬೇಕಿತ್ತು. ಆದರೆ, ದೀರ್ಘವಾಧಿಯಲ್ಲಿ ಜಾಹೀರಾತುಗಳ ಪ್ರಸಾರ ಮಾಡಿದ ನಂತರ ಚಿತ್ರ ಸಂಜೆ 4.30ಕ್ಕೆ ಆರಂಭವಾಗಿದೆ. ಇದು ತನ್ನ ಸಮಯವನ್ನು ವ್ಯರ್ಥ ಮಾಡಿತು ಎಂದು ಆರೋಪಿಸಿ, ಪ್ರಕರಣ ದಾಖಲಿಸಿದ್ದರು.
ದೂರುದಾರರಿಗೆ ಉಂಟಾದ ಅನಾನುಕೂಲತೆ ಮತ್ತು ಮಾನಸಿಕ ತೊಂದರೆಗಾಗಿ 20,000 ರೂ. ಜೊತೆಗೆ ದಾವೆ ವೆಚ್ಚವನ್ನು ಭರಿಸಲು 8,000 ರೂ. ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಇಂದಿನ ಓಡುತ್ತಿರುವ ಜಗತ್ತಿನಲ್ಲಿ ಸಮಯಕ್ಕೆ ತುಂಬಾ ಮೌಲ್ಯವಿದೆ ಮತ್ತು ಗ್ರಾಹಕರ ಸಮಯ ಮತ್ತು ಹಣದಿಂದ ಅನ್ಯಾಯದ ರೀತಿಯಲ್ಲಿ ಲಾಭ ಪಡೆಯುವ ಹಕ್ಕನ್ನು ಯಾವುದೇ ವ್ಯವಹಾರ ಹೊಂದಿಲ್ಲ. ಜಾಹೀರಾತುಗಳನ್ನು ವೀಕ್ಷಿಸಲೆಂದೇ ಜನರು 25 ರಿಂದ 30 ನಿಮಿಷಗಳನ್ನು ಕಳೆಯುವುದು ವಿಶೇಷವಾಗಿ, ಬ್ಯುಸಿಯಾಗಿರುವ ವ್ಯಕ್ತಿಗಳಿಗೆ ಸಮಯ ವ್ಯರ್ಥವಾಗುತ್ತದೆ. ಜನರು ವಿಶ್ರಾಂತಿಗಾಗಿ ಮನರಂಜನೆಯನ್ನು ಬಯಸುತ್ತಾರೆ. ಸಿನಿಮಾ ನೋಡುವುದೆಂದರೆ ಅವರಿಗೆ ಬೇರೆ ಯಾವುದೇ ಕೆಲಸವಿಲ್ಲ ಅಥವಾ ಜವಾಬ್ದಾರಿಗಳಿಲ್ಲ ಎಂದರ್ಥವಲ್ಲ ಎಂದು ನ್ಯಾಯಾಲಯ ಹೇಳಿದೆ.
ಸರ್ಕಾರದ ನಿಯಮಗಳನ್ನು ಉಲ್ಲೇಖಿಸಿದ PVR INOX, ಸಿನಿಮಾ ಪ್ರದರ್ಶನಕ್ಕೂ ಮುನ್ನ ಸಾರ್ವಜನಿಕ ಸೇವಾ ಪ್ರಕಟಣೆಗಳನ್ನು (PSAs) ಪ್ರದರ್ಶಿಸುವ ಅಗತ್ಯವಿದೆ ಎಂದಿದೆ. ಆದರೆ, ಸರ್ಕಾರದ ಈ ರೀತಿಯ ಪ್ರಕಟಣೆಗಳಿಗೆ ಗರಿಷ್ಠ 10 ನಿಮಿಷಗಳ ಸಮಯಾವಕಾಶ ಮಾತ್ರ ಇದೆ ಎಂದು ನ್ಯಾಯಾಲಯ ಹೇಳಿದೆ.
ದೂರುದಾರರು ಜಾಹೀರಾತುಗಳನ್ನು ಸಾಕ್ಷ್ಯವಾಗಿ ದಾಖಲಿಸಿದ್ದಾರೆ. ಇದು ಪೈರಸಿ ವಿರೋಧಿ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು PVR INOX ವಾದಿಸಿದೆ.
ಈ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ, ಕೇವಲ ಜಾಹೀರಾತುಗಳನ್ನು ಮಾತ್ರ ರೆಕಾರ್ಡ್ ಮಾಡಲಾಗಿದೆ, ಚಿತ್ರವನ್ನಲ್ಲ ಮತ್ತು ಅನೇಕ ಪ್ರೇಕ್ಷಕರ ಮೇಲೆ ಪರಿಣಾಮ ಬೀರುವ ಸಮಸ್ಯೆಯನ್ನು ಎತ್ತಿ ತೋರಿಸುವ ಕಾರಣದಿಂದಾಗಿ ರೆಕಾರ್ಡ್ ಮಾಡಲಾಗಿದೆ. ಬೇರೆ ಉದ್ದೇಶಕ್ಕಾಗಿ ಅಲ್ಲ ಎಂದು ತಿಳಿಸಿದೆ.