ಬೆಂಗಳೂರು: ಬೆಂಗಳೂರಿನ ಕೋರಮಂಗಲದಲ್ಲಿ 36 ವರ್ಷದ ಮಹಿಳೆಯ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದು, ಸದ್ಯ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ಮಧ್ಯರಾತ್ರಿ ಈ ಪೈಶಾಚಿಕ ಕೃತ್ಯ ನಡೆದಿದ್ದು, ಶುಕ್ರವಾರ ಬೆಳಗ್ಗೆ ದೂರು ದಾಖಲಾಗಿದೆ.
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಕೊರಮಂಗಲ ಪೊಲೀಸ್ ಠಾಣೆಯಲ್ಲಿ ಗ್ಯಾಂಗ್ ರೇಪ್ ಕೇಸ್ ದಾಖಲಾಗಿದ್ದು, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ಮೂಲದ ಮೂವರು ಆರೋಪಿಗಳಾದ ಅಜಿತ್, ವಿಶ್ವಾಸ್, ಶಿವು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಜ್ಯೋತಿ ನಿವಾಸ್ ಕಾಲೇಜು ಜಂಕ್ಷನ್‌ನಲ್ಲಿ ಬಸ್ ಗಾಗಿ ಕಾಯುತ್ತಿದ್ದಾಗ 20 ವರ್ಷದ ನಾಲ್ವರು ಪುರುಷರು ತನ್ನ ಬಳಿಗೆ ಬಂದು ಮಾತನಾಡಲು ಆರಂಭಿಸಿದ್ದಾರೆ ಎಂದು ವಿವಾಹಿತ ಸಂತ್ರಸ್ತ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಬಳಿಕ ತನ್ನೊಂದಿಗೆ ಸ್ನೇಹ ಬೆಳೆಸಿಕೊಂಡು ಹೋಟೆಲ್‌ನಲ್ಲಿ ಊಟಕ್ಕೆ ಆಹ್ವಾನಿಸಿದರು. ಊಟದ ಬಳಿಕ ಹೋಟೆಲ್ನ ಟೆರೇಸ್ ಮೇಲೆ ಕರೆದುಕೊಂಡು ನಾಲ್ವರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿ ಬೆಳಗ್ಗೆ 6 ಘಂಟೆ ಸುಮಾರಿಗೆ ಮೊಬೈಲ್, ಪರ್ಸ್ ಕಿತ್ತುಕೊಂಡು ಮಹಿಳೆಯನ್ನು ಆರೋಪಿಗಳು ಓಡಿಸಿದ್ದಾರೆ. ಘಟನೆ ಬಳಿಕ 122 ಕರೆ ಮಾಡಿದ ಮಹಿಳೆ ಮಾಹಿತಿ ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೂರಿನಲ್ಲಿ ನಾಲ್ವರು ವ್ಯಕ್ತಿಗಳ ಹೆಸರುಗಳನ್ನು ಹೆಸರಿಸಲಾಗಿದ್ದು, ಅವರಲ್ಲಿ ಮೂವರನ್ನು ಬಂಧಿಸಲಾಗಿದೆ. ಎಲ್ಲಾ ಆರೋಪಿಗಳು ಬೇರೆ ರಾಜ್ಯದವರು ಮತ್ತು ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಜಂಟಿ ಆಯುಕ್ತ(ಪೂರ್ವ) ರಮೇಶ್ ಬಾನೋತ್ ಅವರು ತಿಳಿಸಿದ್ದಾರೆ.