ಬೆಂಗಳೂರು: ಬೇಸಿಗೆ ಸಮೀಪಿಸುತ್ತಿದ್ದಂತೆಯೇ ಅಪಾರ್ಟ್ ಮೆಂಟ್ ಗಳಿಗೆ ಕಾವೇರಿ ನೀರಿನ ಸಂಪರ್ಕವನ್ನು ಮತ್ತಷ್ಟು ಸರಳಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ (BWSSB) ರಾಮ್ ಪ್ರಸಾತ್ ಮನೋಹರ್ ಶುಕ್ರವಾರ ತಿಳಿಸಿದ್ದಾರೆ.
ಮುಂಬರುವ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಹಾಗೂ ಕಾವೇರಿ ಸಂಪರ್ಕಕ್ಕೆ ಎದುರಾಗುವ ಗೊಂದಲಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಅಪಾರ್ಟ್‌ಮೆಂಟ್ ನಿವಾಸಿಗಳಲ್ಲಿ ಜಾಗೃತಿ ಮೂಡಿಸುವ ಹಾಗೂ ಸರಣಿ ಸಭೆಗಳಲ್ಲಿ ಭಾಗವಹಿಸಿ ಈ ಮಾಹಿತಿ ನೀಡಿದರು.
ಕಾವೇರಿ ಸಂಪರ್ಕ ಪಡೆಯಲು ಮಾಡೆಲ್ ಕ್ಯಾಲ್ಯುಕ್ಯುಲೇಟರ್: ಅಪಾರ್ಟ್‌ಮೆಂಟ್‌ಗಳಿಗೆ ಹೆಚ್ಚಿನ ದರವನ್ನು ವಿಧಿಸಲಾಗುತ್ತಿದೆ ಎನ್ನುವ ನಿವಾಸಿಗಳ ಆತಂಕ ಹಾಗೂ ಇನ್ನಿತರೆ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ BWSSB ವೆಬ್ ಸೈಟ್ ನಲ್ಲಿ ಮಾಡೆಲ್ ಕ್ಯಾಲ್ಯುಕ್ಯುಲೇಟರ್ ಪರಿಚಯಿಸಲಾಗುತ್ತಿದೆ. ಇದರಿಂದ ಗ್ರಾಹಕರು ಸುಲಭವಾಗಿ ತಮ್ಮ ಅಪಾರ್ಟ್ ಮೆಂಟ್ ಅಥವಾ ಮನೆಗಳಿಗೆ ಸಂಬಂಧಿಸಿದ ಶುಲ್ಕವನ್ನು ಅಂದಾಜಿಸಬಹುದಾಗಿದೆ. ಇಡೀ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವುದು, ಸ್ಪಷ್ಟತೆ ಹಾಗೂ ಪಾರದರ್ಶಕತೆಯ ಖಾತ್ರಿ ಇದರ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೇ ಶುಲ್ಕಕ್ಕೆ ಸಂಬಂಧಿಸಿದ ದೂರುಗಳನ್ನು ಬಗೆಹರಿಸಲು ಮುಖ್ಯ ಇಂಜಿನಿಯರ್ ನೇತೃತ್ವದಲ್ಲಿ ಮೂವರು ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿ ದೂರುಗಳನ್ನು ಪರಿಶೀಲಿಸಿ ಅವುಗಳ ಬಗ್ಗೆ ಗ್ರಾಹಕರಲ್ಲಿ ಉಂಟಾಗಿರುವ ಗೊಂದಲಗಳನ್ನು ಪರಿಹರಿಸುವ ಕಾರ್ಯ ನಿರ್ವಹಿಸಲಿದೆ. ಹೆಚ್ಚಿನ ಶುಲ್ಕ ಹಾಗೂ ಅನಗತ್ಯ ವಿಳಂಬಕ್ಕೆ ಈ ಸಮಿತಿಯ ಮೂಲಕ ಪಾರದರ್ಶಕವಾಗಿ ಪರಿಹಾರ ನೀಡುವುದು ನಮ್ಮ ಉದ್ದೇಶವಾಗಿದೆ ಎಂದರು.
ಪ್ರತಿನಿತ್ಯ ಪ್ರತಿಮನೆಗೂ 200 ಲೀಟರ್ ನೀರು ಪೂರೈಕೆ: ಕಾವೇರಿ ನೀರಿನ ಸಂಪರ್ಕ ಪಡೆದುಕೊಳ್ಳುವ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಪ್ರತಿನಿತ್ಯ ಪ್ರತಿಮನೆಗೂ ಪ್ರತಿನಿತ್ಯ 200 ಲೀಟರ್ ನೀರು ಸರಬರಾಜು ಮಾಡಲಾಗುವುದು. ಕಾವೇರಿ 5ನೇ ಹಂತದ ಯೋಜನೆ ಲೋಕಾರ್ಪಣೆಯ ನಂತರ ಬೆಂಗಳೂರು ಜಲಮಂಡಳಿಯ ಬಳಿ ಸಾಕಷ್ಟು ನೀರು ಲಭ್ಯವಿದೆ. ಹಂತ ಹಂತವಾಗಿ ಎಲ್ಲಾ ಪ್ರದೇಶಗಳಿಗೂ ಈ ನೀರನ್ನು ತಲುಪಿಸುವ ಕಾರ್ಯದಲ್ಲಿ ಬೆಂಗಳೂರು ಜಲಮಂಡಳಿ ತೊಡಗಿಕೊಂಡಿದೆ. ಅಗತ್ಯವಿರುವ ಪ್ರಮಾಣದ ನೀರನ್ನು ನೀಡುವುದು ನಮ್ಮ ಗುರಿಯಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಭರವಸೆ ನೀಡಿದರು.
258 ಕಾವೇರಿ ಸಂಪರ್ಕ ಅಭಿಯಾನಗಳ ಮೂಲಕ ಇದುವರೆಗೆ 21,000 ಕ್ಕೂ ಹೆಚ್ಚು ಸಂಪರ್ಕಗಳನ್ನು ಒದಗಿಸಲಾಗಿದೆ. ಅಪಾರ್ಟ್ ಮೆಂಟ್ ಗಳಿಗೆ ಸಂಬಂಧಿತ ಸಮಸ್ಯೆಗಳನ್ನು ಪಾರದರ್ಶಕವಾಗಿ ಪರಿಹರಿಸುವುದು ನಮ್ಮ ಪ್ರಾಥಮಿಕ ಉದ್ದೇಶವಾಗಿದೆ.
ಈಗಾಗಲೇ ಬೆಂಗಳೂರು ಪೂರ್ವದ ಹಲವಾರು ಅಪಾರ್ಟ್‌ಮೆಂಟ್‌ಗಳಿಗೆ ಭೇಟಿ ನೀಡಿದ್ದು, ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸಿದ್ದೇವೆ. ಎಲ್ಲಾ ವಲಯಗಳಲ್ಲಿ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.