ಮೈಸೂರು: ಪಕ್ಷದ ಕೇಂದ್ರ ಶಿಸ್ತು ಸಮಿತಿಯಿಂದ ನೋಟಿಸ್ ಪಡೆದಿರುವ ಬಿಜೆಪಿ ಬಂಡಾಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶುಕ್ರವಾರ ಇಲ್ಲಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡರು.
ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಸಾಮಾಜಿಕ ಮಾಧ್ಯಮ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿರುವ ಅವರು, 'ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಚಿಂಚೋಳಿಯಲ್ಲಿರುವ ನಮ್ಮ ಸಿದ್ಧಸಿರಿ ಪವರ್ ಹಾಗೂ ಎಥೆನಾಲ್ ಕಾರ್ಖಾನೆಯನ್ನು ಪ್ರಾರಂಭಿಸಲು ಅನುಮತಿ ನೀಡಿದೆ' ಎಂದಿದ್ದಾರೆ.
'ಈ ಸಂಬಂಧ ನಾನು ನಾಡದೇವತೆ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಪೂಜೆ ಸಲ್ಲಿಸಿದ್ದೇನೆ. ಚಿಂಚೋಳಿ ತಾಲ್ಲೂಕಿನಲ್ಲಿರುವ ನಮ್ಮ ಕಾರ್ಖಾನೆ ಆರಂಭವಾಗುವುದರಿಂದ ನೂರಾರು ಉದ್ಯೋಗ ಸೃಷ್ಟಿಯಾಗುತ್ತದೆ ಹಾಗೂ ರೈತರ ಏಳಿಗೆಗೆ ನಾಂದಿಯಾಗುತ್ತದೆ. ಸತ್ಯಮೇವ ಜಯತೇ' ಎಂದಿದ್ದಾರೆ.
ಪಕ್ಷದ ನಾಯಕತ್ವದ ವಿರುದ್ಧ ದನಿ ಎತ್ತಿದ್ದಕ್ಕಾಗಿ ವಿಜಯಪುರ ಶಾಸಕರಿಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿಯು ಎರಡು ತಿಂಗಳೊಳಗೆ ಎರಡನೇ ಬಾರಿಗೆ ನೋಟಿಸ್ ನೀಡಿತು.
ಪಕ್ಷದ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಅವರು ಕುಟುಂಬ ರಾಜಕಾರಣ, ಹೊಂದಾಣಿಕೆ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಯತ್ನಾಳ್ ಅವರು ನಿರಂತರ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕಿತ್ತೊಗೆಯಬೇಕು ಎಂದು ಯತ್ನಾಳ್ ಬಣ ಪಟ್ಟು ಹಿಡಿದಿದೆ. ಕಳೆದೊಂದು ವರ್ಷದಲ್ಲಿ ಯತ್ನಾಳ್ ಅವರಿಗೆ ಶಿಸ್ತು ಸಮಿತಿ ನೀಡುತ್ತಿರುವ ಮೂರನೇ ನೋಟಿಸ್ ಇದು.
ಯತ್ನಾಳ್ ಅವರು ಸಾಮಾನ್ಯವಾಗಿ ಬಹಿರಂಗವಾಗಿ ಮಾತನಾಡುವ ವ್ಯಕ್ತಿಯಾಗಿದ್ದಾರೆ. ಆದರೆ, ಸದ್ದಿಲ್ಲದೆ ದೇವಾಲಯಕ್ಕೆ ಪ್ರವೇಶಿಸಿದರು ಮತ್ತು ದೇವಾಲಯದ ಹೊರಗೆ ನಿಂತಿದ್ದ ಸುದ್ದಿಗಾರರಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದರು. ಅವರು ದೇವಸ್ಥಾನದಿಂದ ಹೊರಬರುತ್ತಿದ್ದಂತೆ ಕೆಲವರು ಜೈ ವಿಜಯೇಂದ್ರ ಎಂಬ ಘೋಷಣೆಗಳನ್ನು ಕೂಗಿದರು.
ಕಳೆದ ವರ್ಷ ಯತ್ನಾಳ್ ಅವರು ರೈತರಿಗೆ ನೀಡಿರುವ ವಕ್ಫ್ ಬೋರ್ಡ್ ನೋಟಿಸ್‌ಗಳನ್ನು ವಿರೋಧಿಸಿ ಬೀದರ್‌ನಿಂದ ಚಾಮರಾಜನಗರದವರೆಗೆ ಪಾದಯಾತ್ರೆ ಆರಂಭಿಸಿದ್ದರು. ಯತ್ನಾಳ್ ಅವರ ಪಾದಯಾತ್ರೆಯಲ್ಲಿ ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ, ಮಾಜಿ ಶಾಸಕರು, ಸಚಿವರು ಪಾಲ್ಗೊಂಡಿದ್ದರು.