ಬೆಂಗಳೂರು: ವಿದೇಶಿ ವರ್ಕಿಂಗ್ ವೀಸಾ ಕೊಡಿಸುವುದಾಗಿ ನಂಬಿಸಿ 51 ಜನರಿಗೆ ವಂಚಿಸಿದ ದಂಪತಿಗಳನ್ನು ನಗರ ಪೊಲೀಸರು ಶುಕ್ರವಾರ ಬಂಧಿಕ್ಕೊಳಪಡಿಸಿದ್ದಾರೆ.
ತಿಲಕನಗರ ಸಕ್ಲೇನ್ ಸುಲ್ತಾನ್ (34) ಮತ್ತು ಈತನ ಪತ್ನಿ ನಿಖಿತಾ ಸುಲತಾನ್ (28) ಬಂಧಿತರು. ಆರೋಪಿಗಳಿಂದ 2 ಐಷಾರಾಮಿ ಕಾರು, ಎರಡು ದ್ವಿಚಕ್ರ ವಾಹನ, ರೂ.66 ಲಕ್ಷ ನಗರು, 24 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ.
ರಾಜಸ್ಥಾನ ಮೂಲಕ ಮಗ್ ಸಿಂಗ್ ನೀಡಿದ ದೂರಿನ ಮೇಲೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸಕ್ಲೇನ್ ಸುಲ್ತಾನ್ ಈ ಹಿಂದೆ ನಗರದ ರೇಸ್ ಕೋರ್ಸ್ ನಲ್ಲಿ ಹಾಸ್ರ್ ರೈಡಿಂಗ್ ಕಲಿಯುವಾಗ ವಿದೇಶದ ಜಾಕಿಯೊಬ್ಬನ ಪರಿಚಯವಾಗಿತ್ತು. ಈ ವೇಳೆ ಆತ ವಿದೇಶದಲ್ಲಿ ಹಾರ್ಸ್ ಜಾರಿ ಸೇರಿ ಬೇರೆ ಕೆಲಸ ಮಾಡಲು ಆಸಕ್ತರಿರುವ ವ್ಯಕ್ತಿಗಳನ್ನು ವೀಸಾ ಮಾಡಿಸಿಕೊಡುತ್ತೇನೆ. ಆಸಕ್ತರನ್ನು ಪರಿಚಯಿಸಿದರೆ ಒಂದು ವೀಸಾಗೆ ರೂ,50 ಸಾವಿರ ಕಮಿಷನ್ ನೀಡುವುದಾಗಿ ಹೇಳಿದ್ದ. ಅದರಂತೆ ಆರೋಪಿಗಳು ಆರಂಭದಲ್ಲಿ ಇಬ್ಬರಿಗೆ ಈ ವಿದೇಶಿ ಜಾಕಿ ಮುಖಾಂತರ ವೀಸಾ ಮಾಡಿಸಿಕೊಟ್ಟು ರೂ.1 ಲಕ್ಷ ಕಮಿಷನ್ ಪಡೆದಿದ್ದಾರೆ.
ಈ ಜಾಹೀರಾತನ್ನು ದೂರುದಾರ ಮಗ್ ಸಿಂಗ್ ಗಮನಿಸಿದ್ದರು. ಇದೇ ಸಮಯಕ್ಕೆ ಅವರ ಇಬ್ಬರು ಸ್ನೇಹಿತರು ವಿದೇಶದಲ್ಲಿ ಕೆಲಸ ಮಾಡಲು ವೀಸಾ ಮಾಡಿಕೊಡುವವರ ಯಾರಾದರೂ ಇದ್ದಲ್ಲಿ ತಿಳಿಸುವಂತೆ ಕೇಳಿದ್ದರು. ಹೀಗಾಗಿ ಮಗ್ ಸಿಂಗ್ ಜಾಹೀರಾತಿನಲ್ಲಿ ನೀಡಲಾಗಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆರೋಪಿಗಳು ತಮ್ಮ ಕಂಪನಿ ಬೆಂಗಳೂರಿನಲ್ಲಿದ್ದು, ವಿದೇಶಷಗಳಲ್ಲಿ ಕೆಲಸ ಮಾಡಲು ವರ್ಕಿಂಗ್ ವೀಸಾ ಮಾಡಿಸಿಕೊಡುವುದಾಗಿ ಹೇಳಿದ್ದಾರೆ.
ವೀಸಾ ಕೊಡಿಸಲು ತಲಾ ರೂ.8 ಲಕ್ಷ ನೀಡಬೇಕೆಂದು ತಿಳಿಸಿದ್ದಾರೆ. ದಾಖಲೆಗಳನ್ನು ವಾಟ್ಸಾಪ್ ಮೂಲಕ ಕಳುಹಿಸುವಂತೆಯೂ ತಿಳಿಸಿದ್ದಾರೆ. ಬಳಿಕ ಆರೋಪಿಗಳು ಇಬ್ಬರಿಂದ ರೂ.16 ಲಕ್ಷ ಪಡೆದು ಜಪಾನ್ ಮತ್ತು ನ್ಯೂಜಿಲ್ಯಾಂಡ್ ವೀಸಾ ಮಾಡಿಸಿಕೊಟ್ಟಿದ್ದಾರೆ. ಹೇಳಿದಂತೆ ನಡೆದುಕೊಂಡಿದ್ದಕ್ಕೆ ಆರೋಪಿಗಳನ್ನು ನಂಬಿದ್ದ ಮಗ್ ಸಿಂಗ್ ಮತ್ತೆ ಮೂವರು ಸ್ನೇಹಿತರಿಗೆ ವೀಸಾ ಮಾಡಿಸಿಕೊಡುವಂತೆ ರೂ.8 ಲಕ್ಷದಂತೆ ಒಟ್ಟು 24 ಲಕ್ಷ ನೀಡಿದ್ದಾರೆ. ಆದರೆ, ತಿಂಗಳು ಕಳೆದರೂ ವೀಸಾ ಮಾಡಿಸಿರಲಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ಎಂಬೆಸ್ಸಿಯಲ್ಲಿ ಬಾಕಿಯಿದ್ದು, ಕೆಲವೇ ದಿನಗಳಲ್ಲಿ ವೀಸಾ ಆಗಲಿಗೆ ಎಂದು ಹೇಳಿದ್ದಾರೆ.
ಬಳಿಕ ವೀಸಾ ನೀಡಿದ್ದಾರೆ. ಇದನ್ನು ಪರಿಶೀಲಿಸಿದಾಗ ವಿಸಾಗಳು ನಕಲಿ ಎಂಬುದು ತಿಳಿದಿದೆ. ಈ ಬಗ್ಗೆ ಪ್ರಶ್ನಿಸಲು ಕರೆ ಮಾಡಿದರೆ, ಆರೋಪಿಗಳು ಕರೆ ಸ್ವೀಕರಿಸಿಲ್ಲ. ಬಳಿಕ ಬೆಂಗಳೂರಿಗೆ ಬಂದು ವಿಳಾಸಕ್ಕೆ ತೆರಳಿ ನೋಡಿದಾಗ ನಕಲಿ ವಿಳಾಸ ಎಂಬುದು ತಿಳಿದಿದೆ. ಹೀಗಾಗಿ ಆರೋಪಿಗಳ ವಿರುದ್ಧ ಸೈಬರ್ ಕ್ರೈಂ ಠಾಣೆಗೆ ವಂಚನೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಈ ವರೆಗೂ 51 ಮಂದಿಗೆ ವಂಚನೆ ಮಾಡಿರುವುದು, ಸುಮಾರು 2.64 ಕೋಟಿ ರೂ.ಗಳನ್ನು ಸಂಗ್ರಹಿಸುವುದಾಗಿ ತಿಳಿದುಬಂದಿದೆ.