ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ತಕ್ಷಣ ನಡೆಸುವಂತೆ ನಿರ್ದೇಶಿಸಲು ಕೋರಿ ರಾಜ್ಯ ಬಿಜೆಪಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ,
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಈ ಸಂಬಂಧ ಸಮಿತಿಯೊಂದನ್ನು ರಚಿಸಿದ್ದರು. ಈ ಸಮಿತಿಯು ಹಿರಿಯ ವಕೀಲ ಸಂದೀಪ್ ಪಾಟೀಲ ಮೂಲಕ ಸುಪ್ರೀಂ ಕೋರ್ಟಿಗೆ ವಕಾಲತ್ತು ಸಲ್ಲಿಸಿ ಮನವಿ ಮಾಡಿದೆ.
ಮಾಜಿ ಮೇಯರ್‌ಗಳಾದ ಎಂ. ಗೌತಮ್, ಆರ್. ನಾರಾಯಣಸ್ವಾಮಿ, ಮಾಜಿ ಉಪ ಮೇಯರ್ ಎಸ್. ಹರೀಶ್ ಅವರು ಸಹಿ ಮಾಡಿ ಈ ವಕಾಲತ್ತು ಸಲ್ಲಿಸಿದ್ದಾರೆ.
ಈ ಮಧ್ಯೆ, 2013-2015ರಲ್ಲಿ ಚುನಾವಣೆಗಳು 2-3 ವರ್ಷಗಳ ಕಾಲ ವಿಳಂಬವಾದಾಗ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದ ಬೆಂಗಳೂರು ನಗರ ಮಾಜಿ ಮೇಯರ್ ಪಿ.ಆರ್. ರಮೇಶ್ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಬಿಬಿಎಂಪಿ ಚುನಾವಣೆಗಳು 2020 ರಲ್ಲಿ ಬಿಜೆಪಿ ಆಡಳಿತದಲ್ಲಿ ನಡೆಯಬೇಕಿತ್ತು, ಆಗ ಚುನಾವಣೆಗಳು ನಡೆದಿದ್ದರೆ ಅಧಿಕಾರಾವಧಿ ಈಗ ಪೂರ್ಣಗೊಳ್ಳುತ್ತಿತ್ತು, ಆದರೆ ಬಿಜೆಪಿ ಚುನಾವಣೆ ನಡೆಸಲಿಲ್ಲ. ಚುನಾವಣೆಯನ್ನು ಮೊದಲು ಯಾರು ವಿಳಂಬ ಮಾಡಿದರು? ಈಗ ಸಮಯಕ್ಕೆ ಸರಿಯಾಗಿ ಮೊಸಳೆ ಕಣ್ಣೀರು ಸುರಿಸುತ್ತಿರುವವರು ಯಾರು? ಎಂದು ಪ್ರಶ್ನಿಸಿದ್ದಾರೆ.