ಬೆಂಗಳೂರು: ನಾಡಿನಾದ್ಯಂತ ಇಂದು ಮಹಾ ಶಿವರಾತ್ರಿ ಹಬ್ಬದ ಸಂಭ್ರಮ-ಸಡಗರ. ನಸುಕಿನ ಜಾವದಿಂದಲೇ ಶಿವನ ದೇವಾಲಯಗಳಲ್ಲಿ ರುದ್ರಾಭಿಷೇಕ, ಶಿವನಿಗೆ ವಿಶೇಷ ಅಭಿಷೇಕ ಆರಂಭವಾಗಿದೆ. ಬೆಂಗಳೂರಿನ ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಾಲಯದಲ್ಲಿ, ಹನುಮಂತನಗರದ ಗವಿ ಗಂಗಾಧರೇಶ್ವರ ದೇಗುಲದಲ್ಲಿ ಹಬ್ಬದ ಆಚರಣೆ, ಸಂಭ್ರಮ ಜೋರಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿವನಿಗೆ ವಿಶೇಷ ಪೂಜೆ, ಪ್ರಾರ್ಥನೆ, ನೈವೇದ್ಯ, ರುದ್ರಾಭಿಷೇಕ ಮಾಡಿಸುತ್ತಿದ್ದಾರೆ.
ಇಂದು ಬುಧವಾರ ಮುಂಜಾನೆಯಿಂದಲೇ ದೇವಾಲಯಗಳಲ್ಲಿ ಧಾರ್ಮಿಕ ಪೂಜಾ ಕಾರ‍್ಯಗಳು ಆರಂಭವಾಗಿದ್ದು, ಗಂಗಾಜಲ ಅಭಿಷೇಕ, ಫಲಪಂಚಾಮೃತಾಭಿಷೇಕ ಹಾಗೂ ಮಹಾನ್ಯಾಸಪೂರ್ವಕ ಏಕಾದಶವಾರ ರುದ್ರಾಭಿಷೇಕ ನೆರವೇರಿಸಿ, ನಂತರ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಇಂದು ದಿನವಿಡೀ ಶಿವನಿಗೆ ರುದ್ರಾಭಿಷೇಕ, ರುದ್ರ ಪಾರಾಯಣ ನೆರವೇರಲಿದೆ. ದೇವಾಲಯದಲ್ಲಿ ವಿಶೇಷ ಅಲಂಕಾರವನ್ನು ಮಾಡಲಾಗಿದೆ.
ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಬೆಂಗಳೂರಿನ ಗವಿಗಂಗಾಧರೇಶ್ವರ ಸ್ವಾಮಿ ದೇಗುಲದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕ, ಅರ್ಚನಗಳು ನೆರವೇರುತ್ತಿವೆ. ಮುಂಜಾನೆಯಿಂದಲೇ ನೂರಾರು ಭಕ್ತರು ದೇಗುಲಕ್ಕೆ ಆಗಮಿಸಿ ಶಿವಲಿಂಗದ ದರ್ಶನ ಪಡೆಯುತ್ತಿದ್ದಾರೆ. ಬೆಳಗ್ಗೆ ಗವಿಗಂಗಾಧರೇಶ್ವರ ಸ್ವಾಮಿಗೆ ಹಾಲು ಮತ್ತು ಬಿಲ್ವಪತ್ರೆಯಿಂದ ವಿಶೇಷವಾದ ಅಭಿಷೇಕ ಮತ್ತು ಅರ್ಚನ ನೆರವೇರಿಸಲಾಯಿತು.
ಪ್ರಯಾಗ್ ರಾಜ್ ಕುಂಭಮೇಳಕ್ಕೆ ಇಂದು ತೆರೆ
ವಿಶ್ವದಲ್ಲೇ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಎಂದು ಖ್ಯಾತಿ ಪಡೆದಿರುವ ಪ್ರಯಾಗರಾಜ್ ಮಹಾಕುಂಭ ಮೇಳಕ್ಕೆ ಇಂದು ಫೆ.26 ಮಹಾಶಿವರಾತ್ರಿಯಂದು ತೆರೆ ಬೀಳಲಿದೆ. ಇಂದು ಸಂಗಮದಲ್ಲಿ ಕೊನೆಯ ಅಮೃತ ಸ್ನಾನ ನಡೆಯಲಿದ್ದು, ಸುಮಾರು ಒಂದು ಕೋಟಿ ಜನರು ಭಾಗಿಯಾಗುವ ನಿರೀಕ್ಷೆಯಿದೆ.
ಜನವರಿ 13 ರಂದು ಆರಂಭವಾದ ಕುಂಭಮೇಳದಲ್ಲಿ ಈಗಾಗಲೇ 63 ಕೋಟಿಗೂ ಅಧಿಕ ಮಂದಿ ಪುಣ್ಯಸ್ನಾನ ಮಾಡಿದ್ದು, ಈ ಸಂಖ್ಯೆ 65 ಕೋಟಿ ತಲುಪಬಹುದೆಂದು ಅಂದಾಜಿಸಲಾಗಿದೆ. ಜನಸಂದಣಿ ಮತ್ತು ವಾಹನ ದಟ್ಟಣೆ ನಿಯಂತ್ರಿಸುವ ಸಲುವಾಗಿ ಮಂಗಳವಾರ ಸಂಜೆಯಿಂದಲೇ ಪ್ರಯಾಗರಾಜ್‌ಗೆ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಮಧ್ಯೆ, ಕುಂಭಮೇಳಕ್ಕೆ ಬಂದ ಭಕ್ತರು ಸುರಕ್ಷಿತವಾಗಿ ಹಿಂದಿರುಗಲು ರೈಲ್ವೆ ಇಲಾಖೆಯು ಪ್ರಯಾಗರಾಜ್‌ನಿಂದ 350ಕ್ಕೂ ಹೆಚ್ಚು ರೈಲುಗಳ ಕಾರ್ಯಾಚರಣೆಗೆ ಯೋಜಿಸಿದೆ.