ಬೆಂಗಳೂರು: ಬೆಂಗಳೂರು ಮೂಲಸೌಕರ್ಯಕೊರತೆ ವಿಚಾರ ಕುರಿತು ಸಚಿವ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಉದ್ಯಮಿ ಮೋಹನ್‌ದಾಸ್ ಪೈ ನಡುವೆ ಜಟಾಪಟಿ ಶುರುವಾಗಿದ್ದು, ಈ ಜಟಾಪಟಿ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ.
ಬೆಂಗಳೂರು ಪರಿಸ್ಥಿತಿ ದಿನೇ ದಿನೇ ಕೆಟ್ಟದಾಗುತ್ತಿದೆ. ಡಿಕೆ ಶಿವಕುಮಾರ್ ಸಚಿವರಾದ ಬಳಿಕ ಇನ್ನಷ್ಟು ಹದಗೆಟ್ಟಿದೆ. ಬೆಂಗಳೂರಿಗೆ ದೊಡ್ಡ ದೊಡ್ಡ ಘೋಷಿಸುವ ಬದಲು, ಇರುವ ಪಾದಾಚಾರಿ ಮಾರ್ಗದ ಸುಸ್ಥಿತಿ, ಎಲೆಕ್ಟ್ರಿಕ್ ವಾಹನಗಳು, ಮೆಟ್ರೋ ಮಾರ್ಗ ಕಾಮಗಾರಿ ತ್ವರಿತಗೊಳಿಸಬೇಕು. ದೊಡ್ಡ ದೊಡ್ಡ ಯೋಜನೆ ಘೋಷಿಸಲಾಗುತ್ತೆ. ಆದರೆ ಸರ್ಕಾರ ಅದನ್ನು ಜಾರಿ ಮಾಡಲು ದೀರ್ಘ ಸಮಯ ತೆಗೆದುಕೊಳ್ಳುತ್ತದೆ, ಯಾವುದನ್ನೂ ಸಮಯಕ್ಕೆ ಸರಿಯಾಗಿ ಜಾರಿ ಮಾಡಿಲ್ಲ ಎಂದು ಉದ್ಯಮಿ ಮೋಹನ್ ದಾಸ್ ಪೈ ಅವರು ಟೀಕಿಸಿದ್ದರು. ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಭಾರೀ ವಿರೋಧ ವ್ಯಕ್ತಪಡಿಸಿದ್ದರು.
ನಾನು ನಮ್ಮ ಜವಾಬ್ದಾರಿಯಿಂದ ಹಿಂದೆ ಸರಿದಿಲ್ಲ, ಸರಿಯುವುದೂ ಇಲ್ಲ. ನಾನು ಕಳೆದು 30 ವರ್ಷದಿಂದ ಬೆಂಗಳೂರು ಅಭಿವೃದ್ದಿಗಾಗಿ ನಿರಂತರವಾಗಿ ಪ್ರೋತ್ಸಾಹಿಸಿದ್ದೇನೆ. ನೀವು ನಮ್ಮನ್ನು ಆಳುವವರು. ಎರಡು ವರ್ಷದಿಂದ ಏನು ಮಾಡಿದ್ದೀರಿ ಎನ್ನುವುದಕ್ಕೆ ನೀವು ಉತ್ತರದಾಹಿಗಳಾಗಿದ್ದೀರಿ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಿಮ್ಮ ಸ್ವರ, ಸಂದೇಶ ಹಾಗೂ ನಿಲುವು ಯಾವಾಗಲೂ ಸ್ಪಷ್ಟವಾಗಿರುತ್ತದೆ. ಹೌದು, ನಾವು ಜವಾಬ್ದಾರರಾಗಿದ್ದೇವೆ. ನಮ್ಮ ರಾಷ್ಟ್ರವನ್ನು ಮುನ್ನಡೆಸಲು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕ ಶಕ್ತಿ ಕೇಂದ್ರವನ್ನು ನಿರ್ಮಿಸುವ ನಮ್ಮ ಜವಾಬ್ದಾರಿಯಿಂದ ನಾವು ಎಂದಿಗೂ ಹಿಂದೆ ಸರಿದಿಲ್ಲ ಮತ್ತು ಮುಂದೆಯೂ ಕೂಡಾ ಹಿಂದೆ ಸರಿಯುವುದಿಲ್ಲ. ಮುಂದೊಂದು ದಿನ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಸಿಗಬೇಕಾದ ನ್ಯಾಯಯುತ ಪಾಲು ಕೇಳುವಾಗ ನೀವೂ ಕೂಡಾ ವಕಾಲತ್ತು ವಹಿಸುವಿರಿ ಎಂದು ಆಶಿಸುತ್ತೇನೆಂದ ಎಂದು ಖರ್ಗೆ ಹೇಳಿದ್ದಾರೆ.
ಪ್ರಿಯಾಂಕ್ ಖರ್ಗೆ ಹಾಗೂ ಮೋಹನ್ ದಾಸ್ ನಡುವೆ ಜಟಾಪಟಿ ಶುರುವಾಗುತ್ತಿದ್ದಂತೆಯೇ ಕೈಪಡೆ ಕೂಡ ಖರ್ಗೆಯವರಿಗೆ ಬೆಂಬಲ ವ್ಯಕ್ತಪಡಿಸಿದೆ.
ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಅವರು ಮಾತನಾಡಿ, ಪೈ ಅವರ ರಾಜ್ಯಸಭಾ ನಾಮನಿರ್ದೇಶನ ಕೈ ತಪ್ಪುತ್ತಿದೆ, ಹೀಗಾಗಿ ಹತಾಶರಾಗಿ ಮಾತನಾಡುತ್ತಿದ್ದಾರೆಂದು ಹೇಳಿದ್ದಾರೆ.
ಎಂಬಿ ಪಾಟೀಲ್ ಅವರು ಮಾತನಾಡಿ, ಮೋದಿ ಸರ್ಕಾರ ಏನು ಮಾಡಿದರೂ ಸರಿ, ಸಿದ್ದರಾಮಯ್ಯ ಸರ್ಕಾರ ಮಾಡಿದ್ದೆಲ್ಲವೂ ತಪ್ಪು ಎನ್ನುವುದಲ್ಲ. ಇಂತಹ ಟೀಕೆಗಳಿಂದ ಪೈ ದೊಡ್ಡ ಮನುಷ್ಯರಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಪೈ ಕೂಡ ಬೆಂಗಳೂರಿನಿಂದಲೇ ಲಾಭ ಮಾಡಿಕೊಂಡಿರುವವರು. ಇಲ್ಲಿಂದಲೇ ಎಲ್ಲವನ್ನೂ ಪಡೆದುಕೊಂಡಿರುವವರು. ಈಗ ಅವರು ಇಲ್ಲಿಂದ ಹುಬ್ಬಳ್ಳಿಗಾಗಲಿ, ಮೈಸೂರಿಗಾಗಲಿ ಹೋಗಲು ತಯಾರಿಲ್ಲ'. ಪದೇ ಪದೇ ಹೀಗೆ ಮಾತನಾಡುತ್ತಿರುವ ಅವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ ಎಂದು ಹರಿಹಾಯ್ದಿದ್ದಾರೆ.
ಸಂಚಾರ ದಟ್ಟಣೆ ಬರೀ ಬೆಂಗಳೂರಿನ ಸಮಸ್ಯೆಯಲ್ಲ. ಲಂಡನ್, ಸ್ಯಾನ್ ಫ್ರಾನ್ಸಿಸ್ಕೊ, ಚೆನ್ನೈ ಎಲ್ಲ ಕಡೆಗಳಲ್ಲೂ ಇದೆ. ಈ ಬಗ್ಗೆ ಪೈ ಯಾಕೆ ಮಾತನಾಡುವುದಿಲ್ಲ? ಲಂಡನ್ನಿನಲ್ಲಿ ನಾನೇ ಒಂದೂವರೆ ಮೈಲುದ್ದದ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ್ದೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಹದಿನೈದಿಪ್ಪತ್ತು ಮೈಲಿ ಸಂಚಾರ ದಟ್ಟಣೆ ಸೃಷ್ಟಿಯಾಗಿದ್ದಿದೆ.
ಬೆಂಗಳೂರು 'ಗ್ರೋಯಿಂಗ್ ಸಿಟಿ'ಯ ಜತೆಗೆ 'ಗ್ಲೋಬಲ್ ಸಿಟಿ' ಕೂಡ ಆಗಿದೆ. ಹೀಗಾಗಿಯೇ ಕರ್ನಾಟಕದ ಸಮಗ್ರ ಅಭಿವೃದ್ಧಿ ನಮ್ಮ ಆದ್ಯತೆಯಾಗಿದೆ. ಮೋದಿ ಸರಕಾರ ಏನು ಮಾಡಿದರೂ ಸರಿ, ಸಿದ್ದರಾಮಯ್ಯ ಸರಕಾರ ಮಾಡಿದ್ದೆಲ್ಲವೂ ತಪ್ಪು ಎನ್ನುವುದಲ್ಲ. ಇಂತಹ ಟೀಕೆಗಳಿಂದ ಪೈ ದೊಡ್ಡ ಮನುಷ್ಯರಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಯಾರೇ ಆಗಲಿ, ಸರಕಾರಕ್ಕೆ ರಚನಾತ್ಮಕ ಸಲಹೆ ಕೊಡಬಹುದು. ಪೈ ಅವರು ನನ್ನನ್ನಾಗಲಿ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಗಳನ್ನಾಗಲಿ ಅಥವಾ ಐಟಿ ಸಚಿವರನ್ನೇ ಆಗಲಿ ಕಾಣಬಹುದು. ಇದೇ ಪೈ ಮಳೆಗಾಲದಲ್ಲಿ ಬೆಂಗಳೂರಿನ ಒಂದು ಕಡೆ ಪ್ರವಾಹ ಉಂಟಾದಾಗ ವಾಗ್ದಾಳಿ ಮಾಡಿದ್ದರು. ಆದರೆ, ಆಗ ಇಡೀ ಚೆನ್ನೈ ನಗರವೇ ಜಲಾವೃತವಾದರೂ ಜಾಣ ಮೌನ ವಹಿಸಿದ್ದರು. ಬಿಜೆಪಿ ನಮ್ಮ ಕಾರ್ಯಕ್ರಮಗಳನ್ನೇ ನಕಲು ಮಾಡುತ್ತಿದೆ. ಇದನ್ನು ಕಂಡರೂ ಇವರೇಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದ್ದಾರೆ.