ಬೆಂಗಳೂರು: ರಾಜ್ಯದಲ್ಲಿ ವೈದ್ಯಕೀಯ ತಜ್ಞರ ಕೊರತೆ ನೀಗಿಸಲು ಆರೋಗ್ಯ ಇಲಾಖೆ ಮುಂದಾಗಿದ್ದು, ಪರ್ಯಾಯ ನೇಮಕಾತಿ ಆಯ್ಕೆಗಳನ್ನು ಪರಿಚಯಿಸುವುದಾಗಿ ಗುರುವಾರ ತಿಳಿಸಿದೆ.
ನಿಗದಿ ಪಡಿಸಿದ ಮಾಸಿಕ ಗೌರವ ಧನದ ಆಧಾರದ ಮೇಲೆ ವಿಶೇಷ ತಜ್ಞ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ. ನೇಮಕಗೊಂಡ ವಿಶೇಷ ತಜ್ಞ ವೈದ್ಯರಿಗೆ ಸರಕಾರ ನಿಗದಿ ಪಡಿಸಿದ ಮಾಸಿಕ ಗೌರವಧನದ ಆಧಾರ ಮೇಲೆ ವೇತನ ನೀಡಲಾಗುತ್ತದೆ.
ತಜ್ಞ ವೈದ್ಯರಿಗೆ ದಿನವೊಂದಕ್ಕೆ 3,930 ರೂ. ಗೌರವಧನ ನಿಗದಿ ಪಡಿಸಲಾಗಿದೆ. ವೈದ್ಯರು ಮಾಸಿಕ ಎಷ್ಟು ದಿನಗಳು ಕರ್ತವ್ಯ ನಿರ್ವಹಿಸಿದ್ದಾರೆ ಎನ್ನುವ ಹಾಜರಾತಿ ಮೇಲೆ ಗೌರವಧನ ಪಾವತಿಯಾಗಲಿದೆ. ತಜ್ಞ ವೈದ್ಯರು ಕಡ್ಡಾಯವಾಗಿ ವಾರದಲ್ಲಿ ಎರಡು ದಿನ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ. ಇನ್ನೂ ವಿಶೇಷ ತಜ್ಞ ವೈದ್ಯರು ಆಯುಷ್ ಭಾರತ್ ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಯೋಜನೆಯಡಿ ಯಾವುದೇ ಶಸ್ತ್ರ ಚಿಕಿತ್ಸೆಯನ್ನು ಕೈಗೊಂಡರೆ, ಅವರಿಗೆ ಶಸ್ತ್ರ ಚಿಕಿತ್ಸೆಯ ಒಟ್ಟು ಮೊತ್ತದಲ್ಲಿ ನಿಗದಿತ ಪ್ರಮಾಣ ಮೊತ್ತವನ್ನು ಪ್ರೋತ್ಸಾಹಕ ರೂಪದಲ್ಲಿ ನೀಡಲಾಗುತ್ತದೆ.
ವಿಶೇಷವಾಗಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗ, ಅರವಳಿಕೆ ಸೇರಿದಂತೆ ವಿಭಾಗದ ಶಸ್ತ್ರ ಚಿಕಿತ್ಸಕರು ಪ್ರೋತ್ಸಾಹ ಧನ ಪಡೆಯಲು ಅರ್ಹರಾಗಿದ್ದಾರೆ. ಈ ಕುರಿತು ಮಾರ್ಗಸೂಚಿ ನೀಡಲಾಗಿದೆ.
ರೇಡಿಯಾಲಜಿಸ್ಟ್ ಸೇವೆ, ರೇಡಿಯೋಗ್ರಫಿ, ಸಿಟಿ ಎಂಆರ್ ಸ್ಕ್ಯಾನಿಂಗ್ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ವಿಶೇಷ ತಜ್ಞ ವೈದ್ಯರು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.