ಆಂಧ್ರ ಪ್ರದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿಯಲ್ಲಿ ಕಾಲ್ತುಳಿತ ಸಂಭವಿಸಿದ್ದು, 6 ಮಂದಿ ಸಾವನಪ್ಪಿದ್ದಾರೆ. ಘಟನೆಯಲ್ಲಿ 40 ಮಂದಿ ಗಾಯಗೊಂಡಿದ್ದಾರೆ. ಭಕ್ತಾದಿಗಳು ತಿರುಪತಿಯ ವೈಕುಂಠ ದ್ವಾರ ದರ್ಶನದ ಟಿಕೆಟ್ ತೆಗೆದುಕೊಳ್ಳುವ ವೇಳೆ ಭಾರಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಉಂಟಾಗಿದೆ. ಕಾಲ್ತುಳಿತದಲ್ಲಿ ಮೃತಪಟ್ಟ ಮಂದಿಯ ಪೈಕಿ ಓರ್ವರನ್ನು ಬಳ್ಳಾರಿ ಮೂಲದ ಮಹಿಳೆ ನಿರ್ಮಲಾ ಎಂದು ಗುರುತಿಸಲಾಗಿದೆ. ಘಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ. ಪ್ರಕರಣದ ಸಂತ್ರಸ್ಥರಿಗೆ ಆಂಧ್ರ ಪ್ರದೇಶ ಸರ್ಕಾರ ತಲಾ 25 ಲಕ್ಷ ರೂ ಪರಿಹಾರ ಘೋಷಿಸಿದ್ದು, ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ.
ಬಾಂಗ್ಲಾದೇಶದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜೀನ್ಸ್ ಉದ್ಯಮವನ್ನು ಹೆಚ್ಚಿಸಲು ಅವಕಾಶ ಸಿಕ್ಕಿದ್ದು, ಬಳ್ಳಾರಿ ಸಮೀಪದ ಸಂಜೀವರಾಯನಕೋಟೆಯಲ್ಲಿ ಕೆಐಎಡಿಬಿ ವತಿಯಿಂದ ಜೀನ್ಸ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಭರವಸೆಯನ್ನು ಈಡೇರಿಸಲು ಈ ಯೋಜನೆಗಾಗಿ ಈಗಾಗಲೇ 154 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ, ಬಳ್ಳಾರಿಯಲ್ಲಿ 500ಕ್ಕೂ ಹೆಚ್ಚು ಜೀನ್ಸ್ ತಯಾರಿಕಾ ಘಟಕಗಳಿದ್ದು, ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ. ಕೈಗಾರಿಕಾ ಇಲಾಖೆಯು ಜವಳಿ ಇಲಾಖೆಯ ನೆರವಿನೊಂದಿಗೆ ಈ ಪ್ರದೇಶವನ್ನು ಸಂಘಟಿತ ರಫ್ತು ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಯೋಜಿಸಿದೆ ಎಂದು ಸಚಿವರು ತಿಳಿಸಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಿನ್ನೆ ಶರಣಾದ ಆರು ನಕ್ಸಲರನ್ನು ಗುರುವಾರ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಕೋರ್ಟ್ ನಕ್ಸಲರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ನಕ್ಸಲರ ಶರಣಾಗತಿ ಬಗ್ಗೆ ಮಾತನಾಡಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್, ನಕ್ಸಲರು ಶರಣಾಗತಿಗಾಗಿ ಬಂದಾಗ ಯಾವುದೇ ಶಸ್ತ್ರಾಸ್ತ್ರ ಇರಲಿಲ್ಲ. ಪೊಲೀಸರು ಶಸ್ತ್ರಾಸ್ತ್ರಗಳು ಎಲ್ಲಿವೆ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಕಚೇರಿಯಲ್ಲಿ ಮಾವೋವಾದಿಗಳು ಶರಣಾಗುವುದರಲ್ಲಿ ಯಾವುದೇ ತಪ್ಪಿಲ್ಲ, ಯಾರೊಬ್ಬರೂ ನಕ್ಸಲ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸಬೇಕು. ನಕ್ಸಲರ ಪರಿವರ್ತನೆಗೆ ಸರ್ಕಾರ ಅವಕಾಶ ಕಲ್ಪಿಸಿದೆ. ಅದರಲ್ಲಿ ತಪ್ಪೇನು? ಎಂದು ಪ್ರಶ್ನಿಸಿದ್ದಾರೆ.
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸರ್ಕಾರದ ವಿರುದ್ದ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರೊಂದಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನಡೆಸಿದ ಸಂಧಾನ ಸಭೆ ವಿಫಲವಾಗಿದ್ದು, ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಮುಂದುವರೆದಿದೆ. ಮುಷ್ಕರ ಕೈ ಬಿಟ್ಟು ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸಹಕಾರ ನೀಡಬೇಕು. ಹೆಚ್ಚಿನ ಪ್ರೋತ್ಸಾಹಧನ ಕೇಂದ್ರ ಸರಕಾರದ ಅನುದಾನದ ಮೇಲೆ ಒದಗಿಸಲಾಗುತ್ತಿದೆ. ಕಾರ್ಯಕರ್ತೆಯರ ಕಾರ್ಯ ಚಟುವಟಿಕೆಗಳ ಆಧಾರದ ಮೇಲೆ ಪ್ರೋತ್ಸಾಹಧನ ಲಭ್ಯವಾಗುತ್ತದೆ. ಗೌರವಧನದ ಹೊರತಾಗಿ ಆಶಾ ಕಾರ್ಯಕರ್ತೆಯರಿಗೆ ಲಭ್ಯವಾಗುತ್ತಿರುವ ಪ್ರೋತ್ಸಾಹಧನವನ್ನೂ ಮಾಸಿಕ ವೇತನದ ರೂಪದಲ್ಲಿ ನಿಗದಿಪಡಿಸಿ ನೀಡುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ದೂರು ನೀಡಲೆಂದು ಪೊಲೀಸ್ ಠಾಣೆಗೆ ಬಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಅಮಾನತುಗೊಂಡು ನ್ಯಾಯಾಂಗ ಬಂಧನದಲ್ಲಿರುವ ಡಿವೈಎಸ್‌ಪಿ ಎ ರಾಮಚಂದ್ರಪ್ಪ ವಿರುದ್ಧ ಮತ್ತೊಬ್ಬ ಮಹಿಳೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಕೊರಟಗೆರೆ ತಾಲ್ಲೂಕಿನ ಮಹಿಳೆಯೊಬ್ಬರು ಈ ಸಂಬಂಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಲೈಂಗಿಕ ದೌರ್ಜನ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ರಾಮಚಂದ್ರಪ್ಪ ಅವರನ್ನು ಸೇವೆಯಿಂದ ಅಮಾನತು ಮಾಡಿದ್ದರು.