ಬೆಂಗಳೂರು: ಶಾಸಕರ ನೇತೃತ್ವದಲ್ಲಿ ಶಿಕ್ಷಣ ಸುಧಾರಣಾ ಸಮಿತಿಗಳನ್ನು ರಚಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಪೀಪಲ್ಸ್ ಅಲಯನ್ಸ್ ಫಾರ್ ಎಜುಕೇಶನ್ (PAFRE) ವಿರೋಧಿಸಿದೆ. ಈ ಕ್ರಮವನ್ನು ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯ ಉಲ್ಲಂಘನೆ ಎಂದು ಸಂಘ ಕರೆದಿದ್ದು, ಸರ್ಕಾರ ಅದನ್ನು ತಕ್ಷಣ ಹಿಂಪಡೆಯಬೇಕೆಂದು ಒತ್ತಾಯಿಸಿದೆ.
ಶಾಲಾ ನಿರ್ವಹಣೆಯೊಂದಿಗೆ ರಾಜಕೀಯವನ್ನು ಬೆರೆಸುವುದು ಶಿಕ್ಷಣ ವ್ಯವಸ್ಥೆಗೆ ಹಾನಿಯನ್ನುಂಟು ಮಾಡುತ್ತದೆ. ಹಿಜಾಬ್ ಸಮಸ್ಯೆಯಂತಹ ಹಿಂದಿನ ವಿವಾದಗಳು ಈಗಾಗಲೇ ಶಾಲೆಗಳಲ್ಲಿ ಗಮನಾರ್ಹ ಸಮಸ್ಯೆಗಳನ್ನು ಉಂಟುಮಾಡಿವೆ ಎಂದು PAFRE ಹೇಳಿದೆ.
ಈ ಕುರಿತು ಜ.13 ರಂದು ಹೊರಡಿಸಲಾದ ಆದೇಶದಲ್ಲಿ ತಾಲ್ಲೂಕು ಮಟ್ಟದಲ್ಲಿ ಈ ಸಮಿತಿಗಳನ್ನು ಸ್ಥಾಪಿಸಲು ಅಧಿಕಾರಿಗಳಿಗೆ ಸೂಚಿಸಿದೆ. ಈ ನಿರ್ಧಾರವು ಆರ್‌ಟಿಇ ಕಾಯ್ದೆಗೆ ವಿರುದ್ಧವಾಗಿದೆ. ಆರ್ ಟಿಇ ಕಾಯ್ದೆ ಶಾಲೆಗಳನ್ನು ಸ್ಥಾಪಿಸುವುದು, ಎಲ್ಲಾ ಮಕ್ಕಳಿಗೆ ಶಿಕ್ಷಣವನ್ನು ಖಚಿತಪಡಿಸುವುದು ಮತ್ತು ಶಾಲಾ ಸೌಲಭ್ಯಗಳನ್ನು ನಿರ್ವಹಿಸುವಂತಹ ಪ್ರಮುಖ ಜವಾಬ್ದಾರಿಗಳನ್ನು ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್‌ಗಳಂತಹ ಸ್ಥಳೀಯ ಸಂಸ್ಥೆಗಳಿಗೆ ವಹಿಸುತ್ತದೆ ಎಂದು PAFRE ತಿಳಿಸಿದೆ.
ಸರ್ಕಾರ ಸ್ಥಳೀಯ ಅಧಿಕಾರಿಗಳ ಅಧಿಕಾರವನ್ನು ಕಿತ್ತು ಶಾಸಕರಿಗೆ ನೀಡುತ್ತಿದೆ. ಇದು ಕಾನೂನಿಗೆ ವಿರುದ್ಧವಾಗಿದೆ ಮತ್ತು ಶಾಲೆಗಳನ್ನು ನಿರ್ವಹಿಸುವ ವಿಧಾನವನ್ನೇ ಅಡ್ಡಿಪಡಿಸುತ್ತದೆ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ಪ್ರೊ. ವಿ.ಪಿ. ನಿರಂಜನಾರಾಧ್ಯ ಹೇಳಿದರು.
ಶಾಸಕರ ನೇತೃತ್ವದ ಸಮಿತಿಗಳು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳ (SDMCs) ಕೆಲಸಕ್ಕೆ ಅಡ್ಡಿಪಡಿಸಬಹುದು ಎಂದು ಅರು ಹೇಳಿರುವುದಾಗಿ PAFRE ಹೇಳಿದೆ.
ತಾಲ್ಲೂಕು ಮಟ್ಟದಲ್ಲಿ ಶಿಕ್ಷಣ ಸುಧಾರಣಾ ಸಮಿತಿಯ ಭಾಗವಾಗಿ, ಕಡಿಮೆ ಹಾಜರಾತಿ ಹೊಂದಿರುವ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ 'ಹಬ್ & ಸ್ಪೋಕ್' ಮಾದರಿಯನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (AIDSO) ಟೀಕಿಸಿದೆ. ಇದು 4,000 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವತ್ತ ಒಂದು ಹೆಜ್ಜೆಯಾಗಿದೆ ಎಂದು AIDSO ಕರ್ನಾಟಕ ರಾಜ್ಯ ಸಮಿತಿ ಹೇಳಿದೆ.