ಯತೀಂದ್ರ ಸಿದ್ದರಾಮಯ್ಯ 
ರಾಜ್ಯ

MUDA case: ಪ್ರಕರಣದಲ್ಲಿ ನನ್ನ ತಂದೆಯನ್ನು ಸಿಲುಕಿಸಲು ಇ.ಡಿ ಯತ್ನಿಸುತ್ತಿದೆ: ಯತೀಂದ್ರ ಸಿದ್ದರಾಮಯ್ಯ

ನಮ್ಮ ನಿವೇಶನಗಳ ವಿಷಯ ವಿಭಿನ್ನವಾಗಿದೆ. ನಮ್ಮ ಭೂಮಿಯನ್ನು ಮುಡಾ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದು, ಅದರ ಬದಲಿಗೆ 14 ನಿವೇಶನಗಳನ್ನು ನಮಗೆ ಮಂಜೂರು ಮಾಡಿದೆ.

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ಮೂಲಕ ತನ್ನ ತಂದೆಯನ್ನು ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಲಾತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಆರೋಪಿ ಎಂದು ಸಾಮಾನ್ಯ ಅಭಿಪ್ರಾಯ ಮೂಡಿಸಲು ಇ.ಡಿ ಬಯಸಿದೆ. ಇ.ಡಿ ಉದ್ದೇಶಪೂರ್ವಕವಾಗಿಯೇ ಸಿದ್ದರಾಮಯ್ಯ ಅವರ ಹೆಸರನ್ನು ಅಧಿಕೃತ ಸಂವಹನದಲ್ಲಿ ಉಲ್ಲೇಖಿಸಿದೆ. ನಮ್ಮ ಪಾಲಿಗೆ ಬಂದಿರುವ 14 ಸೈಟ್‌ಗಳಲ್ಲಿ ಅಕ್ರಮ ಏನೂ ಇಲ್ಲ ಎಂಬುದು ಅವರಿಗೂ ಚೆನ್ನಾಗಿ ತಿಳಿದಿದೆ. ಕಾನೂನುಬದ್ಧವಾಗಿ ನಿವೇಶನ ಹಂಚಿಕೆ ಮಾಡಿರುವುದು ಅವರಿಗೂ ಗೊತ್ತಿದೆ. ಆದರೆ, ಅವರ ಮೇಲೆ ಕೇಂದ್ರ ಸರ್ಕಾರ ನಿರಂತರ ಒತ್ತಡ ಹೇರುತ್ತಿದೆ ಎಂದರು.

'ಕರ್ನಾಟಕ ಬಿಜೆಪಿ ಘಟಕ ಮತ್ತು ಇತರ ವಿರೋಧ ಪಕ್ಷಗಳು ಸಿಎಂ ಸಿದ್ದರಾಮಯ್ಯ ಅವರನ್ನು ಹೇಗಾದರೂ ಸರಿ ಈ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಬೇಕೆಂದು ಒತ್ತಡ ಹೇರುತ್ತಿವೆ. ಇ.ಡಿ ಆ ಸೂಚನೆಗಳನ್ನು ಅನುಸರಿಸುತ್ತಿದೆ. ಕರ್ನಾಟಕ ಮಾತ್ರವಲ್ಲದೆ ಇತರ ರಾಜ್ಯಗಳಲ್ಲಿಯೂ ಕೇಂದ್ರದ ಯಾವುದೇ ತನಿಖಾ ಸಂಸ್ಥೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಬಹಿರಂಗ ರಹಸ್ಯವಾಗಿದೆ. ಇ.ಡಿ ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಅಂತಿಮವಾಗಿ, ಸತ್ಯ ಮತ್ತು ನ್ಯಾಯಕ್ಕೆ ಜಯ ಲಭಿಸುತ್ತದೆ. ಸಿಎಂ ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ, ಕ್ಲೀನ್ ಇಮೇಜ್‌ನೊಂದಿಗೆ ಪ್ರಕರಣದಿಂದ ಹೊರಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

'ಸಿಎಂ ಸಿದ್ದರಾಮಯ್ಯ ವಿರುದ್ಧ ಅವರಿಗೆ (ಇ.ಡಿ) ಯಾವ ಸಾಕ್ಷ್ಯ ಸಿಕ್ಕಿದೆ? ಅವರು ಅದನ್ನು ತೋರಿಸಲಿ. ಅವರು ಇತರರ ವಶಪಡಿಸಿಕೊಂಡ ಆಸ್ತಿಯನ್ನು ತೋರಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅಥವಾ ನಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿರುವ ಯಾವುದೇ ಆಸ್ತಿಯನ್ನು ಇ.ಡಿ ಮುಟ್ಟುಗೋಲು ಹಾಕಿಕೊಂಡಿಲ್ಲ. ಇ.ಡಿ ಅಧಿಕೃತ ಹೇಳಿಕೆಗಳಲ್ಲಿ ಸಿದ್ದರಾಮಯ್ಯ ಅವರನ್ನು ಆರೋಪಿಯನ್ನಾಗಿ ಮಾಡುವ ಇಚ್ಛಾಶಕ್ತಿಯಿಂದ ಅವರ ಹೆಸರನ್ನು ಉಲ್ಲೇಖಿಸಲಾಗಿದ್ದು, ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ' ಎಂದು ಆರೋಪಿಸಿದರು.

ನಮ್ಮ ನಿವೇಶನಗಳ ವಿಷಯ ವಿಭಿನ್ನವಾಗಿದೆ. ನಮ್ಮ ಭೂಮಿಯನ್ನು ಮುಡಾ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದು, ಅದರ ಬದಲಿಗೆ 14 ನಿವೇಶನಗಳನ್ನು ನಮಗೆ ಮಂಜೂರು ಮಾಡಿದೆ. ಆದರೆ, ಮುಡಾದಲ್ಲಿ ನಡೆದಿರುವ ಹಗರಣವೇ ಬೇರೆ. ಮುಡಾದ ಕೆಲವು ಸದಸ್ಯರು ಮತ್ತು ಇತರರು ರೈತರಿಂದ ಖರೀದಿಸಿದ ಜಮೀನಿನ ಮಾಲೀಕರಿಗೆ 50:50 ಅನುಪಾತದ ನಿವೇಶನಗಳನ್ನು ಪರಿಹಾರವಾಗಿ ನೀಡುವ ಮೂಲಕ ಹಗರಣ ಮಾಡಿದ್ದಾರೆ. ಅದು ಕಾನೂನಿಗೆ ವಿರುದ್ಧವಾಗಿದ್ದು, ಅದನ್ನು ಎದುರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ನಮ್ಮ ಕುಟುಂಬಕ್ಕೆ ಮಂಜೂರಾದ 14 ನಿವೇಶನಗಳಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ' ಎಂದು ಸ್ಪಷ್ಟಪಡಿಸಿದರು.

ನಂಬಿಕೆ ಇರುವವರು ಕುಂಭಮೇಳದಲ್ಲಿ ಪಾಲ್ಗೊಳ್ಳಲಿ

ಮಹಾ ಕುಂಭಮೇಳದ ಬಗ್ಗೆ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ, 'ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ನಿರ್ಧರಿಸುವವರು ಯಾರು? ನಂಬಿಕೆ ಇರುವವರು ಕುಂಭಮೇಳದಲ್ಲಿ ಪಾಲ್ಗೊಳ್ಳುತ್ತಾರೆ ಮತ್ತು ಸ್ನಾನ ಮಾಡುತ್ತಾರೆ. ನಂಬಿಕೆ ಇಲ್ಲದವರು ಹೋಗುವುದಿಲ್ಲ. ಎಲ್ಲರಿಗೂ ಒಂದೇ ನಂಬಿಕೆ ಇರಬೇಕು ಎಂದು ಹೇಳಲು ಸಾಧ್ಯವಿಲ್ಲ ಎಂದರು.

'ನಾನು ದೇವರನ್ನು ನಂಬುತ್ತೇನೆ ಮತ್ತು ನನ್ನ ತಂದೆ ನಂಬುವುದಿಲ್ಲ. ಇಷ್ಟೆಲ್ಲ ಆದರೂ ನಾವು ಒಂದೇ ಮನೆಯಲ್ಲಿ ವಾಸಿಸುತ್ತಿದ್ದೇವೆ. ನಾನು ದೇವರನ್ನು ಪೂಜಿಸುತ್ತೇನೆ. ಆದರೆ, ನನ್ನ ತಂದೆ ಪೂಜೆ ಮಾಡುವುದಿಲ್ಲ. ನಂಬಿಕೆಯುಳ್ಳವರು ಮತ್ತು ನಂಬಿಕೆಯಿಲ್ಲದವರು ಒಟ್ಟಿಗೆ ವಾಸಿಸಬಹುದು. ಯಾರ ಮೇಲೂ ನಮ್ಮ ನಂಬಿಕೆಯನ್ನು ಹೇರಲು ಸಾಧ್ಯವಿಲ್ಲ' ಎಂದು ಅಭಿಪ್ರಾಯಪಟ್ಟರು.

'ಕಾಂಗ್ರೆಸ್‌ನ ಯಾವೊಬ್ಬ ನಾಯಕರೂ ಕುಂಭಮೇಳವನ್ನು ಟೀಕಿಸಿಲ್ಲ. ಜನರು ಕುಂಭಮೇಳಕ್ಕೆ ಹೋಗಬೇಡಿ, ಸ್ನಾನ ಮಾಡಬೇಡಿ ಎಂದು ಯಾವುದೇ ನಾಯಕರು ಹೇಳಿಕೆ ನೀಡಿದ್ದಾರೆಯೇ? ಈ ಬಗ್ಗೆ ಯಾರೂ ಹೇಳಿಕೆ ನೀಡಿಲ್ಲ, ನಂಬಿಕೆ ಇರುವವರು ಕುಂಭದಲ್ಲಿ ಪಾಲ್ಗೊಳ್ಳಲಿ. ನಂಬಿಕೆ ಇಲ್ಲದವರು ಹೋಗುವುದು ಬೇಡ. ಪ್ರತಿಯೊಬ್ಬರಿಗೂ ಅವರ ನಂಬಿಕೆಗೆ ಅನುಸಾರ ಬದುಕುವ ಹಕ್ಕಿದೆ' ಎಂದು ಯತೀಂದ್ರ ಹೇಳಿದರು.

'ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಹಾಕುಂಭಮೇಳದಲ್ಲಿ ಸ್ನಾನ ಮಾಡಿದರೆ ಬಡತನ ಮಾಯವಾಗುವುದಿಲ್ಲ ಎಂದು ಭಾವಿಸಿದ್ದಾರೆ. ಇದು ಅವರ ನಂಬಿಕೆ. ಅವರ ದೃಷ್ಟಿಕೋನವನ್ನು ನಾವು ಗೌರವಿಸಬೇಕು. ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳುವ ಜನರ ಭಕ್ತಿ ಭಾವನೆಗಳನ್ನೂ ಕೂಡ ನಾವು ಗೌರವಿಸಬೇಕು. ಜನರ ಮೇಲೆ ಏನನ್ನೂ ಹೇರಬಾರದು' ಎಂದು ಸೂಚಿಸಿದರು.

'ಹಜ್ ಯಾತ್ರೆಯನ್ನು ಕೂಡ ಟೀಕಿಸಲಾಗುತ್ತದೆ. ಅದರ ಬಗ್ಗೆ ಮಾತನಾಡಬೇಡಿ ಎಂದು ಯಾರು ಹೇಳುತ್ತಾರೆ? ನಾಸ್ತಿಕರು ಎಲ್ಲ ಧರ್ಮಗಳಲ್ಲೂ ಇದ್ದಾರೆ ಮತ್ತು ಅವರು ಎಲ್ಲ ಧರ್ಮಗಳನ್ನು ಟೀಕಿಸುತ್ತಾರೆ. ಹಿಂದೂ ಮೂಲಭೂತವಾದಿಗಳು ಒಂದು ರೀತಿಯ ನಂಬಿಕೆ ವ್ಯವಸ್ಥೆಯನ್ನು ಹೇರಲು ಪ್ರಯತ್ನಿಸುತ್ತಿದ್ದಾರೆ, ಅವರು ನಿಜವಾದ ಭಯೋತ್ಪಾದಕರು' ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

SCROLL FOR NEXT