ಬೆಂಗಳೂರು: ನಗರದ ಹೊರವಲಯದ ಕಾಡು ಗೋಡಿ ಬಳಿಯ ದಿನ್ನೂರು ಗ್ರಾಮದಲ್ಲಿ ದಲಿತರು ವ್ಯವಸಾಯ ಮಾಡುತ್ತಿರುವ ಬೆಲೆಬಾಳುವ ಜಮೀನನ್ನು ಅರಣ್ಯ ಇಲಾಖೆ ವಶಕ್ಕೆ ಪಡೆಯಲು ಮುಂದಾಗಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.
ಅರಣ್ಯಾಧಿಕಾರಿಗಳ ಕ್ರಮದ ವಿರುದ್ಧ ವಿಧಾನಪರಿಷತ್ತಿನ ಪ್ರತಿಪಕ್ಷದನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಬಿಜೆಪಿ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಸರ್ಕಾರವು ಅರಣ್ಯ ಸಚಿವ ಈಶ್ವರ ಖಂಡ್ರೆ ನೇತೃತ್ವದಲ್ಲಿ ದಲಿತರ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ. ದಲಿತರ ವಿರುದ್ದ ನಡೆಯುತ್ತಿರುವ ಕಾರ್ಯಾಚರಣೆ ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ದಿನ್ನೂರಿನಲ್ಲಿ 711 ಎಕರೆ ಜಾಗ ಇತ್ತು. ರೈಲ್ವೆ ಇಲಾಖೆಗೆ 278 ಎಕರೆ, ದೇವಸ್ಥಾನಕ್ಕೆ ಸುಮಾರು 3 ಎಕರೆ, ರಸ್ತೆಗೆ 13 ಎಕರೆ, ಇಂದಿರಾ ಕ್ಯಾಂಟೀನ್‌ಗೆ 13 ಗುಂಟೆ, ದಿನ್ನೂರು ಕಾಲೊನಿಯಲ್ಲಿ ಮನೆ ಕಟ್ಟಲು 20 ಎಕರೆ ಜಮೀನು ಕೊಟ್ಟಿದ್ದಾರೆ. ಸ್ಮಶಾನಕ್ಕೆ ಎರಡೂವರೆ ಎಕರೆ, ಬಡಾವಣೆ ಮಾಡಲು 32 ಎಕರೆ ಕೊಟ್ಟಿದ್ದು ಪೊಲೀಸ್‌ಠಾಣೆಗೂ ನಾಲ್ಕೂವರೆ ಎಕರೆ ನೀಡಿದ್ದಾರೆ.125 ಎಕರೆಯಲ್ಲಿ ಕೃಷಿ ಕಾರ್ಯ ನಡೆದಿದೆ. ಇದರಲ್ಲಿ ಮೆಟ್ರೊಗೆ 45 ಎಕರೆ ನೀಡಿದ್ದಾರೆ ಎಂದು ತಿಳಿಸಿದರು.
1950ರಲ್ಲೇ ಸರ್ಕಾರ ರೈತರಿಗೆ ಜಾಗ ಮಂಜೂರು ಮಾಡಿತ್ತು. ಅಂದಿನಿಂದ ರೈತರು ಅಲ್ಲಿ ಬೇಸಾಯ ಮಾಡುತ್ತ ಬಂದಿದ್ದರು. ಜಾಗ ತೆರವಿಗೆ ತಡೆಯಾಜ್ಞೆ ಇದೆ. ಆದರೂ, ತೆರವು ಪ್ರಯತ್ನ ಖಂಡನೀಯ, ಪ್ರಕರಣ ಕೋರ್ಟಿನಲ್ಲಿದೆ ಎಂದು ಗಮನಕ್ಕೆ ತಂದರೆ ಸರ್ಕಾರ ತಮಗೆ ಟಾಸ್ಕ್ ನೀಡಿದೆ; ನಮ್ಮ ಕೆಲಸ ನಾವು ಮಾಡಿಯೇ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದು ಹಾಸ್ಯಾಸ್ಪದ ಎಂದು ಟೀಕಿಸಿದರು.
ಮಾಜಿ ಸಂಸದ ಎಸ್. ಮುನಿಸ್ವಾಮಿ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ದಲಿತ ರೈತರ ಜಮೀನು ತೆರವಿಗೆ ಮುಂದಾಗಿದೆ. ತಮ್ಮ ಕ್ರಮದ ವಿರುದ್ಧ ಪ್ರತಿಭಟಿಸುವವರ ಮೇಲೆ ದೌರ್ಜನ್ಯ, ಹಲ್ಲೆ ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ. ಇದು ಖಂಡನೀಯ ಎಂದು ತಿಳಿಸಿದರು. ಕೇವಲ ದಲಿತ ರೈತರು ಮಾತ್ರ ಕಾನೂನು ವ್ಯಾಪ್ತಿಯಡಿ ಬರುತ್ತಾರಾ? ಎಂದು ಇದೇ ವೇಳೆ ಪ್ರಶ್ನಿಸಿದ್ದಾರೆ.
ಅದೆಲ್ಲವೂ ಅರಣ್ಯ ಇಲಾಖೆಗೆ ಸೇರಿದ್ದರೆ ರೈಲ್ವೆಗೆ ಕೊಟ್ಟ ಜಾಗವನ್ನೂ ತೆರವುಗೊಳಿಸಿ, ಕೆಐಎಡಿಬಿಗೆ ನೀಡಿದ ಜಾಗವನ್ನೂ ತೆರವುಗೊಳಿಸಬೇಕು. ಮೆಟ್ರೊ, ಪೊಲೀಸ್‌ಠಾಣೆಮೊದಲಾದಉದ್ದೇಶಕ್ಕೆ ಕೊಟ್ಟಿರುವ ಜಾಗಗಳನ್ನು ತೆರವುಗೊಳಿಸಿ ಎಂದು ಆಗ್ರಹಿಸಿದ್ದಾರೆ.
ಈ ಮಧ್ಯೆ ಬಿಜೆಪಿ ನಾಯಕರ ಆರೋಪಗಳಿಗೆ ಪ್ರತಿಕ್ರಿಯಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ಆ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದಾಗಿದ್ದು, ಬೇರೆ ಯಾವುದೇ ಉದ್ದೇಶಗಳಿಗೆ ಹಂಚಿಕೆ ಮಾಡಲು ಅಥವಾ ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
120 ಎಕರೆಗಳು ಯಾರಿಗೂ ಅರ್ಥವಾಗದ ಭೂಮಿಯಂತಿದ್ದು, ಕೆಲವರು ಅದನ್ನು ತಮ್ಮ ಭೂಮಿ ಎಂದು ಹೇಳಿಕೊಂಡು ಮಾರಾಟ ಮಾಡಲು ಪ್ರಯತ್ನಿಸುವ ಮೂಲಕ ಇತರರನ್ನು ವಂಚಿಸಿದ್ದಾರೆ. ಅರಣ್ಯ ಇಲಾಖೆ ಯಾರನ್ನೂ ಸ್ಥಳಾಂತರಿಸದೆ ಅದರ ಭೂಮಿಯನ್ನು ವಾಪಸ್ ಪಡೆಯುತ್ತಿದೆ. ಆ ಪ್ರದೇಶ ಅರಣ್ಯ ಭೂಮಿಯಾಗಿಯೇ ಉಳಿಯುತ್ತದೆ ಎಂದು ತಿಳಿಸಿದರು.
ಈ ಮಧ್ಯೆ, ಬೆಂಗಳೂರಿನ ಬಿಜೆಪಿ ಕಚೇರಿಯ ಹೊರಗೆ ಪ್ರತಿಭಟನಾ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬಿಜೆಪಿ ನಾಯಕರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.
ಪೊಲೀಸರ ಅನುಮತಿಯಿಲ್ಲದೆ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿಯ ಹೊರಗೆ ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಆದರೂ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿಲ್ಲ ಎಂದು ಬಿಜೆಪಿ ನಾಯಕರು ಹೇಳಿದರು.