ಬೆಂಗಳೂರು: ಬೀದಿ-ಬೀದಿಗಳಲ್ಲಿ ಚಿಂದಿ ಆಯುತ್ತಾ ನಗರದಲ್ಲಿ ತನ್ನ ಪಯಣವನ್ನು ಆರಂಭಿಸಿದ್ದ ವ್ಯಕ್ತಿಯೊಬ್ಬ ಕುಖ್ಯಾತ ಕಳ್ಳನಾಗಿ ಬದಲಾಗಿದ್ದು, ಈತನನ್ನು ಮಡಿವಾಳ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬಾಲಾಜಿ ಅಲಿಯಾಸ್ ಪ್ರಕಾಶ್ (43) ಬಂಧಿತ ಆರೋಪಿ. ಈತ ಅತ್ತಿಬೆಲೆ ಬಳಿಯ ಯಡವನಹಳ್ಳಿ ನಿವಾಸಿ. ಕದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಲು ಸಹಕರಿಸುತ್ತಿದ್ದ ಪ್ರಕಾಶ್ ಸ್ನೇಹಿತ ರಾಜೇಂದ್ರ (40)ನನ್ನೂ ಪೊಲೀಸರು ಬಂಧಿಸಿದ್ದಾರೆ. ಈತ ಟೈಲರಿಂಗ್ ಕೆಲಸ ಮಾಡುತ್ತಿದ್ದ.
ಆರೋಪಿ ಗಳಿಂದ 75 ಲಕ್ಷ ರೂ. ಮೌಲ್ಯದ 779 ಗ್ರಾಂ ಚಿನ್ನಾಭರಣ, 100 ಗ್ರಾಂ ಬೆಳ್ಳಿ, ನಕಲಿ ಕೀಗಳನ್ನು ತಯಾರಿಸುವ ಉಪಕರಣ, 138 ನಕಲಿ ಕೀಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಅಪ್ರಾಪ್ತ ವಯಸ್ಸಿನಿಂದಲೇ ಕಳ್ಳತನ ಆರಂಭಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಬೀದಿಗಳಲ್ಲಿ ಚಿಂದಿ ಆಯುತ್ತಾ ನಗರದಲ್ಲಿ ತನ್ನ ಪಯಣ ಆರಂಭಿಸಿದ್ದ ಆರೋಪಿ, ನಂತರ ತನ್ನ ಮಾದಕ ದ್ರವ್ಯ, ಮದ್ಯ ಮತ್ತು ಬೆಟ್ಟಿಂಗ್ ಚಟಗಳ ನೀಗಿಸಿಕೊಳ್ಳಲು ಕಳ್ಳತನಕ್ಕಿಳಿದಿದ್ದ ಎಂದು ತಿಳಿದುಬಂದಿದೆ.
ಆರೋಪಿ ಮಾರಾಟಕ್ಕಿರುವ ಫ್ಲ್ಯಾಟ್‌ಗಳು ಅಥವಾ ಕಟ್ಟಡಗಳನ್ನು ಹುಡುಕಿ, ಖರೀದಿದಾರನ ಸೋಗಿನಲ್ಲಿ ಮಾಲೀಕರ ವಿಶ್ವಾಸ ಗಳಿಸುತ್ತಿದ್ದ. ಬಳಿಕ ಅವರ ಗಮನಕ್ಕೆ ಬಾರದೆ ಬಾಗಿಲಿನ ಕೀಲಿಗಳನ್ನು ಕದಿಯುತ್ತಿದ್ದ. ಸಾಧ್ಯವಾಗದಿದ್ದರೆ, ತನ್ನ ಮೊಬೈಲ್‌ನಲ್ಲಿ ಕೀಲಿಗಳ ಚಿತ್ರವನ್ನು ತೆಗೆದುಕೊಳ್ಳುತ್ತಿದ್ದ.
ಆರು ತಿಂಗಳ ನಂತರ ಹಿಂತಿರುಗಿ ಹೋಗಿ ಆ ಮನೆಗಳಲ್ಲಿ ಮಹಿಳೆಯರ ಪಾದರಕ್ಷೆಗಳಿವೆಯೇ ಎಂದು ಪರಿಶೀಲಿಸುತ್ತಿದ್ದ. ಅಲ್ಲಿ ನಿವಾಸಿಗಳು ಹೊರಗೆ ಹೋಗುವವರೆಗೆ ಕಾದು ಕುಳಿತು, ನಂತರ ನಕಲಿ ಕೀಲಿಗಳನ್ನು ಬಳಸಿ ಒಳಗೆ ಪ್ರವೇಶಿಸಿ ಬೆಲೆಬಾಳುವ ವಸ್ತುಗಳನ್ನು ಖದಿಯುತ್ತಿದ್ದ.
ಪೊಲೀಸರ ದಾರಿ ತಪ್ಪಿಸಲು ಕಳ್ಳತನ ಮಾಡುವ ಸಮಯದಲ್ಲಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಟಿ ಶರ್ಟ್‌ಗಳನ್ನು ಧರಿಸಿ ಡೆಲಿವರಿ ಬಾಯ್‌ನಂತೆ ನಟಿಸುತ್ತಿದ್ದ.
ಕಳೆದ ವರ್ಷ ಮೇ ತಿಂಗಳಲ್ಲಿ ಆರೋಪಿಯನ್ನು ಬಂಧಿಸಿದ್ದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿಗಳು, ಜೈಲಿಗೆ ಕಳುಹಿಸಿದ್ದರು.
ಜೈಲಿನಿಂದ ಹೊರಬಂದ ನಂತರವೂ ತನ್ನ ಚಟ ಬಿಡದ ಆರೋಪಿ ಮತ್ತೆ 13 ಮನೆಗಳಲ್ಲಿ ಕಳ್ಳತನ ಮಾಡಿದ್ದ. ಸಿಕ್ಕಿಬೀಳುತ್ತೇನೆಂಬ ಭಯದಿಂದ ಮೊಬೈಲ್ ಫೋನ್ ಬಳಕೆ ಮಾಡುತ್ತಿರಲಿಲ್ಲ. ಪೊಲೀಸರು ಆರೋಪಿಯ ಪತ್ನಿ ಮತ್ತು ಸಹಚರರ ಫೋನ್ ಕರೆಗಳ ಮೇಲೆ ಹದ್ದಿನ ಕಣ್ಣಿಟ್ಟರು. ಇದರಿಂದ ಆರೋಪಿ ಪತ್ತೆ ಮಾಡುವಲ್ಲಿ ಯಶಸ್ವಿಯಾದರು.
ಆರೋಪಿಯು ಮಡಿವಾಳ, ಎಚ್‌ಎಸ್‌ಆರ್ ಲೇಔಟ್, ಬಂಡೇಪಾಳ್ಯ, ಎಂಐಸಿಒ ಲೇಔಟ್, ಹುಳಿಮಾವು ಸೇರಿದಂತೆ ನಗರದ ಇತರೆ ಪ್ರದೇಶಗಳಲ್ಲಿ ಕಳ್ಳತನ ಮಾಡಿದ್ದಾನೆಂದು ತಿಳಿದುಬಂದಿದೆ,