ಹುಬ್ಬಳ್ಳಿ: ಪುತ್ರನ ವ್ಹೀಲಿಂಗ್ ಶೋಕಿಯಿಂದಾಗಿ ಪೋಷಕರು ಆಘಾತ ಎದುರಿಸುವಂತಾಗಿದ್ದು, ಪೋಷಕರಿಗೆ ಪೊಲೀಸರು ದುಬಾರಿ ದಂಡ ಹೇರಿದ್ದಾರೆ.
ಹೌದು... ಬೈಕ್ ವ್ಹೀಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಟ್ರಾಫಿಕ್ ಪೊಲೀಸರು ಪೋಷಕರಿಗೆ ಶಾಕ್ ನೀಡಿದ್ದು ಬರೊಬ್ಬರಿ 25 ಸಾವಿರ ರೂ ದಂಡ ಹಾಕಿದ್ದಾರೆ. ಅಲ್ಲದೆ ವ್ಹೀಲಿಂಗ್ ಗಾಗಿ ಬಳಕೆ ಮಾಡಲಾದ ಬೈಕ್ ಅನ್ನೂ ಸಹ ಸೀಜ್ ಮಾಡಿದ್ದಾರೆ.
ಹುಬ್ಬಳ್ಳಿಯ ಉಣಕಲ್ ಹತ್ತಿರ ಇಬ್ಬರು ಅಪ್ರಾಪ್ತ ಯುವಕರು ಬೈಕ್ ವ್ಹೀಲಿಂಗ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಈ ಬೈಕ್ ಸವಾರರ ವಿರುದ್ಧ ಹುಬ್ಬಳ್ಳಿ ಟ್ರಾಫಿಕ್ ಪೊಲೀಸರು ಕ್ರಮ ಕೈಗೊಂಡಿದ್ದು ಬೈಕ್ ಸೀಜ್ ಮಾಡಿ ದಂಡ ಹಾಕಿದ್ದಾರೆ.
ಅಚ್ಚರಿ ಎಂದರೆ ವ್ಹೀಲಿಂಗ್ ಮಾಡಿದ ಯುವಕರ ಪೋಷಕರಿಗೆ ಪೊಲೀಸರು ದಂಡ ಹಾಕಿದ್ದಾರೆ. ಕೋರ್ಟ್ ಆದೇಶದ ಅನ್ವಯ ಆರೋಪಿಗಳ ಪೋಷಕರಿಗೆ ದಂಡಹಾಕಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಮಾಹಿತಿ ನೀಡಿರುವ ಪೊಲೀಸರು, 'ಹುಬ್ಬಳ್ಳಿಯ ಉಣಕಲ್ ಹತ್ತಿರ ವ್ಹೀಲಿಂಗ್ ಮಾಡಿದ್ದ ವಾಹನವನ್ನು ಸೀಜ್ ಮಾಡಲಾಗಿದ್ದು, ಬೈಕ್ ಸವಾರ ಅಪ್ರಾಪ್ತ ವಯಸ್ಸಿನವನಾದ ಕಾರಣ ಆತನ ಪೋಷಕರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಕೋರ್ಟ್ ನೋಟೀಸ್ ಜಾರಿ ಮಾಡಿದ್ದು, ಮಾನ್ಯ ನ್ಯಾಯಾಲಯವು ಪೋಷಕರಿಗೆ 25,000/- ರೂ ದಂಡ ವಿಧಿಸಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.