ಬೆಂಗಳೂರು: ಬಿಬಿಎಂಪಿ ತನ್ನ ವ್ಯಾಪ್ತಿಯಲ್ಲಿ ಎಸ್‌ಸಿ ಜಾತಿ ಸಮೀಕ್ಷೆಗೆ ಇದೂವರೆಗೆ 1.48 ಕೋಟಿ ರೂ. ಖರ್ಚು ಮಾಡಿದೆಯೇ? ಹೌದು, ಎನ್ನುತ್ತಿದೆ ಪಾಲಿಕೆಯ ಮೂಲಗಳು...
ಸಮೀಕ್ಷೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ಮನೆ ಮನೆಗಳಿಗೆ ಸ್ಟಿಕ್ಕರ್ ಗಳನ್ನು ಅಂಟಿಸಲಾಗುತ್ತಿದ್ದು, ಇದಕ್ಕಾಗಿ ರೂ.70 ಲಕ್ಷ ಹಾಗೂ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಸಮೀಕ್ಷಾ ಜಾಗೃತಿ ಮೂಡಿಸಲು 28 ಲಕ್ಷ ರೂ. ಖರ್ಚು ಮಾಡಿದೆ ಎಂದು ತಿಳಿದುಬಂದಿದೆ.
ಸುರಲ್ಕರ್ ವಿಕಾಸ್ ಕಿಶೋರ್ ಅವರು ಮಾತನಾಡಿ, ಸ್ಟಿಕ್ಕರ್‌ಗಳು, ಕರಪತ್ರಗಳ ವಿತರಣೆ ಮತ್ತು ಕಾರ್ಮಿಕರನ್ನು ತೊಡಗಿಸಿಕೊಳ್ಳುವುದು ಸೇರಿದಂತೆ ಸಮೀಕ್ಷೆಗೆ ಅಂದಾಜು 1.75 ಕೋಟಿ ರೂ. ವೆಚ್ಚವಾಗಿದೆ. ಸಮೀಕ್ಷೆಯ ವೆಚ್ಚವು ಪೂರ್ಣಗೊಳ್ಳುವ ಹೊತ್ತಿಗೆ 3 ಕೋಟಿ ರೂ. ತಲುಪಬಹುದು ಎಂದು ಹೇಳಿದ್ದಾರೆ.
ಬೀದಿ ನಾಟಕಗಳು, ಕಿರುಚಿತ್ರಗಳು, ಸಾಮಾಜಿಕ ಮಾಧ್ಯಮ, ಐಇಸಿ ಮತ್ತು ಇತರ ವೇದಿಕೆಗಳ ಮೂಲಕ ಎಸ್‌ಸಿ ಜನಸಂಖ್ಯೆಯ ಸಮೀಕ್ಷೆಯ ಕುರಿತು ಜಾಗೃತಿ ಮೂಡಿಸಲು ಬಿಬಿಎಂಪಿ ವಿಸ್ತೃತ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಕಿಶೋರ್ ಅವರು ತಿಳಿಸಿದ್ದಾರೆ.
ಫೇಸ್‌ಬುಕ್, ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಎರಡು ಕಿರುಚಿತ್ರಗಳಿಗೆ 28 ಲಕ್ಷ ರೂ. ವೆಚ್ಚವಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಶೇ.18 ಜಿಎಸ್‌ಟಿ ಸೇರಿದಂತೆ, ಪಾಲಿಕೆಯ ಖರ್ಚು ಸುಮಾರು 49,56,000 ರೂ.ಗಳಾಗಿದೆ. ಕ್ಯಾಮೆರಾ, ಕ್ಯಾಮೆರಾಮನ್, ಚಿತ್ರಕಥೆಗಾರರು, ಧ್ವನಿವರ್ಧಕ ಕಲಾವಿದರು ಮತ್ತು ಸಂಗೀತಗಾರರನ್ನು ನೇಮಿಸಿಕೊಳ್ಳಲು ಪಾಲಿಕೆಗೆ 12 ಲಕ್ಷ ರೂ.ಗಳಷ್ಟು ವೆಚ್ಚ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಇಷ್ಟೆಲ್ಲಾ ಖರ್ಚು ಮಾಡಲಾಗಿದೆ. ಈವರೆಗೂ ಬೆಂಗಳೂರು ನಗರದಲ್ಲಿ ಶೇ.60ರಷ್ಟು ಕೂಡ ಸರ್ವೇ ನಡೆದಿಲ್ಲ. ಅಲ್ಲದೆ, ಸಮೀಕ್ಷೆಯ ನೈಜತೆಯ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದು, ಕರ್ತವ್ಯ ಲೋಪಕ್ಕಾಗಿ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಏಳು ಕಂದಾಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.