ರಾಯಚೂರು: ಮೊಹರಂ ಆಚರಣೆ ವೇಳೆ ಅಗ್ನಿ ಕುಂಡದಲ್ಲಿ ಬಿದ್ದ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನಲ್ಲಿ ನಡೆದಿದೆ. ಹನುಮಂತ ಯರಗಂಟಿ (33) ಗಾಯಗೊಂಡ ಯುವಕನಾಗಿದ್ದಾನೆ.
ದರ್ಗಾದ ಮುಂದೆ ಕೆಂಡ ಹಾಯಲು ಸಿದ್ಧಪಡಿಸಲಾದ ಅಗ್ನಿ ಕುಂಡದಲ್ಲಿ ಕಟ್ಟಿಗೆಗಳನ್ನು ಹಾಕಿ ಬೆಂಕಿ ಹಚ್ಚಲಾಗಿತ್ತು. ಈ ವೇಳೆ ಹನುಮಂತನಿಗೆ ಬೆಂಕಿಗೆ ಬಿದ್ದಿದ್ದಾನೆ. ಕೂಡಲೇ ಬೆಂಕಿಯಿಂದ ದೇಹ ಸುಟ್ಟು ಹೋಗಿದೆ. ತಕ್ಷಣ ಸ್ಥಳದಲ್ಲಿದ್ದವರು ಆತನ ನೆರವಿಗೆ ಧಾವಿಸಿದ್ದು, ರಕ್ಷಿಸಲು ಹರಸಾಹಸ ಪಟ್ಟಿದ್ದಾರೆ.
ಬಳಿಕ ಗಾಯಾಳುವನ್ನು ಲಿಂಗಸೂಗೂರು ತಾಲೂಕ್ ಆಸ್ಪತ್ರೆಗೆ, ತದನಂತರ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆತ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ.
ಈ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಅಲಾಯಿ ಅಗ್ನಿ ಕುಂಡದ ಬಳಿ ನಡೆದು ಹೋಗುವಾಗ ಆಕಸ್ಮಿಕ ಕಾಲು ಜಾರಿ ಹನುಮಂತ ಕುಂಡಕ್ಕೆ ಬಿದ್ದಿದ್ದು, ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಆತನನ್ನು ತಕ್ಷಣವೇ ರಕ್ಷಿಸಲು ನಮಗೆ ಸಾಧ್ಯವಾಗಲಿಲ್ಲ ಎಂದು ಅವರ ಸಂಬಂಧಿ ಮೌನೇಶ್ ಹೇಳಿದರು.