ಬೆಂಗಳೂರು: ತೆರಿಗೆ ವಂಚನೆ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮೂಲದ ವ್ಯಕ್ತಿಯನ್ನು ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ ಮಂಗಳವಾರ ಬಂಧನಕ್ಕೊಳಪಡಿಸಿದೆ.
ನಗರದ ಪೂರ್ವ ವಲಯ ಪೊಲೀಸರ ನೆರವಿನೊಂದಿಗೆ ವಾಣಿಜ್ಯ ತೆರಿಗೆ ಇಲಾಖೆಯ ಮತ್ತು ಗುಪ್ತಚರ ವಿಭಾಗದ ಅಧಿಕಾರಿಗಳು ರಾಜಸ್ಥಾನ ಮೂಲಕ ಜಾಲೋರ್ ಜಿಲ್ಲೆಯ ನಿವಾಸಿ ಕೈಲಾಶ್ ವಿಲ್ಲೊಯ್ ಎಂಬಾತನನ್ನು ಬಂಧನಕ್ಕೊಳಪಡಿಸಿದ್ದಾರೆ.
ಜನ ಸಾಮಾನ್ಯರ ಆಧಾರ್ ಮತ್ತು ಪ್ಯಾನ್ ವಿವರ ಬಳಸಿಕೊಂಡು ಜಿಎಸ್‌ಟಿ ನೋಂದಣಿ ಮಾಡಿ, ತೆರಿಗೆ ವಂಚಿಸುತ್ತಿದ್ದ ಜಾಲ ರಾಜ್ಯದಲ್ಲಿ ಸಕ್ರಿಯವಾಗಿರುವ ಬಗ್ಗೆ 2023ರಲ್ಲಿ ದೂರು ಬಂದಿತ್ತು. ಅದರಂತೆ ತನಿಖೆ ಆರಂಭಿಸಿದ್ದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, ಈ ಜಾಲದ ಕಿಂಗ್‌ಪಿನ್ ಆಗಿದ್ದ ಕೈಲಾಶ್ ಎಂಬಾತನನ್ನು ಬಂಧಿಸಿದ್ದಾರೆ.
ನಗರದ ಮುರುಗೇಶಪಾಳ್ಯದಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಕೆಲ ವ್ಯಕ್ತಿಗಳು ಇತರರ ಆಧಾರ್ ಕಾರ್ಡ್ ಮತ್ತು ಪ್ಯಾನ್ ಬಳಸಿಕೊಂಡು ಒಂದೇ ದಿನ ಹತ್ತು ಬ್ಯಾಂಕ್ ಖಾತೆ ತೆರೆಯಲು ಯತ್ನಿಸಿದ್ದರು. ಈ ಸಂಬಂಧ ಜೀವನ ಬಿಮಾ ನಗರ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ದೂರು ನೀಡಿದ್ದರು. ಆ ದೂರಿನ ಆಧಾರದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದರು.
ತನಿಖೆ ವೇಳೆ ಈ ಜಾಲವು ಹಲವು ರಾಜ್ಯಗಳಲ್ಲಿ ಸಕ್ರಿಯವಾಗಿರುವುದು ಪತ್ತೆಯಾಗಿತ್ತು. ಆರೋಪಿ ನಕಲಿ ಆಧಾರ್ ಕಾರ್ಡ್‌ಗಳನ್ನು ಬಳಸಿಕೊಂಡು ಬಹು ಬ್ಯಾಂಕ್ ಖಾತೆಗಳನ್ನು ತೆರೆದಿದ್ದು, ಅವರ ಹೆಸರಿನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನೋಂದಣಿಗಳನ್ನು ಪಡೆದಿದ್ದ. ಕರ್ನಾಟಕವನ್ನೇ ಕೇಂದ್ರವಾಗಿರಿಸಿಕೊಂಡಿದ್ದ ಆರೋಪಿ ಕಾರ್ಯನಿರ್ವಹಿಸುತ್ತಿದ್ದ. ಕರ್ನಾಟಕದಲ್ಲೇ 17 ಕಂಪನಿಗಳನ್ನು ನೋಂದಣಿ ಮಾಡಿಸಿದ್ದ. ಆ ಕಂಪನಿಗಳ ಹೆಸರಿನಲ್ಲಿ, ಕಬ್ಬಿಣದ ಗುಜರಿ ವ್ಯವಹಾರದಲ್ಲಿ ತೊಡಗಿರುವ ಕಂಪನಿಗಳಿಗೆ ನಕಲಿ ಇನ್‌ವಾಯ್ಸ್‌ಗಳನ್ನು ಸೃಷ್ಟಿಸಿಕೊಟ್ಟಿದ್ದ ಎಂದು ವಾಣಿಜ್ಯ ತೆರಿಗೆ ಇಲಾಖೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರಿನ ವಿಶೇಷ ಆರ್ಥಿಕ ನ್ಯಾಯಾಲಯವು ಆರೋಪಿಯನ್ನು ಹೆಚ್ಚಿನ ತನಿಖೆಗಾಗಿ ಇಲಾಖೆಗೆ ಹಸ್ತಾಂತರಿಸಿದೆ.
ಆರೋಪಿಯನ್ನು ವಶಕ್ಕೆ ಪಡೆದಿರುವ ವಾಣಿಜ್ಯ ತೆರಿಗೆ ಇಲಾಖೆಯು, ತನಿಖೆಯನ್ನು ಮುಂದುವರೆಸಿದೆ. ಪ್ರಕರಣವನ್ನು ಬಹು ಆಯಾಮಗಳಿಂದ ವಿಶ್ಲೇಷಣೆ ನಡೆಸುತ್ತಿದೆ.
ಆರೋಪಿ ಬಂಧನ ಕುರಿತು ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು, ಕಟ್ಟುನಿಟ್ಟಿನ ಕ್ರಮಗಳು ತೆರಿಗೆ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು, ನ್ಯಾಯವನ್ನು ಎತ್ತಿಹಿಡಿಯಲು ಮತ್ತು ರಾಜ್ಯ ಮತ್ತು ಪ್ರಾಮಾಣಿಕ ತೆರಿಗೆದಾರರ ಹಿತಾಸಕ್ತಿಗಳನ್ನು ಕಾಪಾಡಲು ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತವೆ ಎಂದು ಹೇಳಿದ್ದಾರೆ.