ಗದಗ: ಕುಡಿಯುವ ನೀರಿನ ಸೌಲಭ್ಯಗಳು ದೊರಕದ ಕಾರಣ ಯಾವುದೇ ದಾರಿಯಿಲ್ಲದೆ ಗದಗದ ತಿಮ್ಮಾಪುರ ಗ್ರಾಮದ ನಿವಾಸಿಗಳು ಕಲುಷಿತಗೊಂಡಿರುವ ಕೆರೆಯ ನೀರನ್ನೇ ಸೇವನೆ ಮಾಡುತ್ತಿದ್ದಾರೆ.
ಮಳೆ ಕೊರತೆಯಿಂದಾಗಿ ಈಗಾಗಲೇ ಕೆರೆ ಬತ್ತುತ್ತಾ ಬಂದಿದ್ದು, ಅಳಿದ-ಉಳಿದ ನೀರಿನಿಂದಲೂ ದುರ್ವಾಸಣೆ ಬರುತ್ತಿದೆ. ಹೀಗಾಗಿ ಸ್ಥಳೀಯರು ಈ ಸಮಸ್ಯೆಯನ್ನು ತುರ್ತು ಪರಿಶೀಲನೆ ನಡೆಸಿ, ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಕಲುಷಿತ ನೀರು ಸೇವನೆ ಮಾಡಿದ ಪರಿಣಾಮ ಈಗಾಗಲೇ ಹಲವು ನಿವಾಸಿಗಳು ಗಂಟಲು ನೋವು, ಸೋಂಕು, ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದು, ರೋಗ ಹರಡುವ ಕುರಿತು ಆತಂಕ ಹೆಚ್ಚಾಗಿದೆ.
ಗ್ರಾಮದ ಅನೇಕರು ರೈತರು ಹಾಗೂ ದಿನಗೂಲಿ ಕಾರ್ಮಿಕರಾಗಿದ್ದು, ಹಣ ತೆತ್ತು ನೀರಿನ ಟ್ಯಾಂಕರ್ ಪಡೆಯುವ ಸ್ಥಿತಿಯಲ್ಲಿಲ್ಲ. ಕುಡಿಯುವ ನೀರಿನ ಲಭ್ಯವಿಲ್ಲದ ಕಾರಣ ಈಗಾಗಲೇ ಇಲ್ಲಿನ ಹಲವು ನಿವಾಸಿಗಳು ಸಂಬಂಧಿಕರು ಮನೆಗೆ ಬಾರದಂತೆ ಸೂಚಿಸಿದ್ದಾರೆಂದು ತಿಳಿದುಬಂದಿದೆ.
ಈ ಪ್ರದೇಶದಲ್ಲಿ ಮುಂಗಾರು ಮಳೆಯಾಗದ ಕಾರಣ ಬೆಳೆಗಳಿಗೆ ನೀರು ಸಿಗದೆ ರೈತರು ಇನ್ನಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ.
ಗದಗ ಲಕ್ಕುಂಡಿಯಲ್ಲಿ ಉತ್ತಮ ಮಳೆಯಾಗಿದ್ದರೂ, ಇದೇ ಜಿಲ್ಲೆಯ ತಿಮ್ಮಾಪುರಸ, ನರೇಗಲ್ ಸುತ್ತಮುತ್ತಲಿನ ಇತರೆ ಗ್ರಾಮಗಳಲ್ಲಿ ಮಳೆಯಾಗಿಲ್ಲ. ಇದೀಗ ಗ್ರಾಮಸ್ಥರು ಮುಖ್ಯಮಂತ್ರಿಗಳ ಸಂಪರ್ಕಿಸಲು ಮುಂದಾಗಿದ್ದಾರೆ. ಈ ಗ್ರಾಮವನ್ನು ಸಿದ್ದರಾಮಯ್ಯ ಗ್ರಾಮ ಎಂದೂ ಕರೆಯಲಾಗುತ್ತದೆ. ಸಿಎಂ ಸಿದ್ದರಾಮಯ್ಯ ಅವರ ಅಭಿಮಾನಿಗಳು ಮತ್ತು ಅನುಯಾಯಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ಹಿಂದೆ ಇಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿ, ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಇದೀಗ ಗ್ರಾಮಸ್ಥರು ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಬದಲಾಯಿಸುವುದರ ಜೊತೆಗೆ ನೀರಿನ ಬಿಕ್ಕಟ್ಟಿಗೆ ಶಾಶ್ವತ ಪರಿಹಾರವನ್ನು ಒದಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.