ಬೆಂಗಳೂರು: ಮಹಿಳೆಯರ ಸಬಲೀಕರಣಕ್ಕೆ ಗೃಹಲಕ್ಷ್ಮಿ, ಶಕ್ತಿ ಯೋಜನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಸರ್ಕಾರಿ ಜಾರಿ ಮಾಡಿದೆ. ಇದರಿಂದ ಸಮಾಜಕ್ಕೆ, ಮಹಿಳಾ ಕುಲಕ್ಕೆ ಶಕ್ತಿ ಬಂದಿದೆಯೇ ಹೊರತು ಯಾರೂ ಸೋಮಾರಿಗಳಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ, ಕೆಲವರು ತಮ್ಮ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಿಂದ ಜನ ಸೋಂಬೇರಿಗಳಾಗುತ್ತಿದ್ದಾರೆ ಅನ್ನುತ್ತಾರೆ, ರಾಜಕೀಯಕ್ಕೆ ಹಾಗೆ ಹೇಳುತ್ತಾರೋ ಅಥವಾ ತನ್ನೊಂದಿಗಿನ ವೈರತ್ವಕ್ಕೆ ಹಾಗೆ ಮಾತಾಡುತ್ತಾರೋ ಗೊತ್ತಿಲ್ಲ. ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಮಾರಿಗಳಾಗಿಲ್ಲ ಎಂದು ಹೇಳಿದರು
ಯಾವುದೇ ಸಂಘಟನೆ 25 ವರ್ಷ ಪೂರೈಸಿದರೆ ಅದು ದೊಡ್ಡ ಯಶಸ್ಸು. ರಾಜ್ಯ ಅಹಲ್ಯಾ ಬಾಯಿ ಹೋಳ್ಕರ್ ಮಹಿಳಾ ಸಂಘ ಅತ್ಯಂತ ಯಶಸ್ವಿ ಆಗಿದೆ. ಇದಕ್ಕಾಗಿ ಶ್ರಮಿಸಿದ ಯಲ್ಲಮ್ಮ ಮತ್ತು ಜೊತೆಗಿರುವ ಪ್ರತಿಯೊಬ್ಬರೂ ಅಭಿನಂದನಾರ್ಹರು. ರಾಜ್ಯ ಅಹಲ್ಯಾಬಾಯಿ ಮಹಿಳಾ ಸಂಘಕ್ಕೆ ಬೆಂಗಳೂರಿನಲ್ಲಿ ಜಮೀನು ನೀಡಲಾಗುವುದು ಎಂದು ಸಂತೋಷದಿಂದ ಘೋಷಿಸುತ್ತೇನೆ ಎಂದರು.
20 ವರ್ಷ ಅಧಿಕಾರದಲ್ಲಿದ್ದರೂ ತನ್ನ ಸಾಮ್ರಾಜ್ಯ ಉಳಿಸಲು ಅಗತ್ಯವಾದ ಎಲ್ಲಾ ಅರ್ಹತೆಗಳನ್ನು ಬೆಳೆಸಿಕೊಂಡಿದ್ದರೂ ರಾಣಿ ಅಹಲ್ಯಾಬಾಯಿಗೆ ಸಾಮ್ರಾಜ್ಯ ವಿಸ್ತರಿಸುವ ಹಪಾಹಪಿ ಇರಲಿಲ್ಲ. ಖಜಾನೆ ತುಂಬಿದ್ದರೂ ಸರಳ ಜೀವನ ನಡೆಸುತ್ತಾ, ಸುಸ್ಥಿರ ಆಡಳಿತ, ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಹರಿಸಿದ್ದರು ಎಂದು ಹೇಳಿದರು.
ರಾಣಿ ಅಹಲ್ಯಾ ಬಾಯಿ ಬಾಲ್ಯ ವಿವಾಹ ನಿಲ್ಲಿಸುವ ಮೂಲಕ ಸಾಮಾಜಿಕ ಬದಲಾವಣೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಜಾತ್ಯತೀತ ಮನೋಭಾವ ಹೊಂದಿದ್ದ ಅಹಲ್ಯಾ ಬಾಯಿ ಆಗಲೇ ಅಂತರ್ಜಾತಿ ವಿವಾಹ ಮಾಡಿಸಿದ್ದರು ಎಂದು ಅವರ ಗುಣಗಾನ ಮಾಡಿದರು.
ಶೇ100 ರಷ್ಟು ಅಂಕಗಳನ್ನು ಪಡೆಯುವುದರಲ್ಲಿ ಹೆಣ್ಣುಮಕ್ಕಳೇ ಮುಂದಿದ್ದು, ಸೈನ್ಯದಲ್ಲಿ, ಅಂತರಿಕ್ಷದಲ್ಲೂ ಹೆಣ್ಣು ಮಕ್ಕಳು ಕೆಲಸ ಮಾಡುತ್ತಿರುವುದು ಮಹಿಳಾ ಕುಲದ ಪ್ರಗತಿಯ ಪ್ರತೀಕವಾಗಿದೆ. ಶಿಕ್ಷಣ-ಸಂಘಟನೆ-ಹೋರಾಟ ಅಂಬೇಡ್ಕರ್ ಅವರು ಶೋಷಿತ ಜಾತಿ-ಸಮುದಾಯಗಳಿಗೆ ಕೊಟ್ಟಿರುವ ಮಂತ್ರ. ಶೂದ್ರರು ಮತ್ತು ಮಹಿಳೆಯರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಆದರೆ ಅಂಬೇಡ್ಕರ್ ಅವರ ಕಾರಣದಿಂದ ಶೂದ್ರ ಮತ್ತು ಮಹಿಳಾ ಕುಲಕ್ಕೆ ಶಿಕ್ಷಣ ಕಲಿಯುವ ಅವಕಾಶ ಒದಗಿ ಬಂತು. ಇದಕ್ಕೆ ನಮ್ಮ ಸಂವಿಧಾನ ನೀಡಿದ ಕಡ್ಡಾಯ ಶಿಕ್ಷಣ ಕಾನೂನು ನೆರವಾಯಿತು ಎಂದರು.
ಕುರುಬರಿಗೆ ಅಕ್ಷರ ಹತ್ತಲ್ಲ, ಶಿಕ್ಷಣ ಏಕೆ ಎಂದು ನಮ್ಮ ಅಜ್ಜಿ ಹೇಳುತ್ತಿದ್ದರು. ಆದರೆ, ನಾನು ಶಾಲೆಗೆ ಹೋಗಿ ಕಾನೂನು ಪದವಿ ಪಡೆದು ಮುಖ್ಯಮಂತ್ರಿಯೂ ಆದೆ. ನಾನು ಶಾಲೆಗೆ ಹೋಗಿ ಶಿಕ್ಷಣ ಕಲಿಯುವ ಅವಕಾಶ ಉಪಯೋಗಿಸಿಕೊಳ್ಳದಿದ್ದರೆ ನಾನೂ ಹಸು, ಕುರಿ ಕಾಯುತ್ತಾ ಇರಬೇಕಾಗಿತ್ತು. ಆದ್ದರಿಂದ ರಾಣಿ ಅಹಲ್ಯಾ ಬಾಯಿ ಅವರ ಶಿಕ್ಷಣ ಕ್ರಾಂತಿ ಈ ಮಹಿಳಾ ಸಂಘಟನೆ ಸೇರಿದಂತೆ ಎಲ್ಲರಿಗೂ ಪ್ರೇರಣೆ ಆಯಿತು.