ಭಟ್ಕಳ: ಭಟ್ಕಳ ಪಟ್ಟಣವನ್ನು 24 ಗಂಟೆಗಳ ಒಳಗೆ ಸ್ಫೋಟಿಸುವುದಾಗಿ ಬೆದರಿಕೆ ಹಾಕುವ ಇಮೇಲ್ ಕಳುಹಿಸಲಾದ ಪ್ರಕರಣವನ್ನು ಉತ್ತರ ಕನ್ನಡ ಪೊಲೀಸರು ಭೇದಿಸಿದ್ದಾರೆ. ಮೇಲ್ ಕಳುಹಿಸಿದ ವ್ಯಕ್ತಿ ಒಬ್ಬ ಸಾಮಾನ್ಯ ಅಪರಾಧಿಯಾಗಿದ್ದು, ದೇಶಾದ್ಯಂತ ಪೊಲೀಸ್ ಠಾಣೆಗಳನ್ನು ಸ್ಫೋಟಿಸುವುದಾಗಿಯೂ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ.
ಮೇಲ್ ಕಳುಹಿಸಿದ ಆರೋಪಿಯನ್ನು ಉತ್ತರ ಪ್ರದೇಶದ ನೋಯ್ಡಾ ಮೂಲದ ಜತಿನ್ ಶರ್ಮಾ ಎಂದು ಗುರುತಿಸಲಾಗಿದೆ. ಈತ ದೇಶಾದ್ಯಂತ ಹಲವಾರು ಸ್ಥಳಗಳಿಗೆ ಈ ಹಿಂದೆ ಇಮೇಲ್‌ಗಳನ್ನು ಕಳುಹಿಸಿರುವ ಸಾಮಾನ್ಯ ಅಪರಾಧಿಯಾಗಿದ್ದಾನೆ.
ಮುನ್ನಾರ್ ಜೈಲಿನಲ್ಲಿ ಕಣ್ಣನ್ ಗುರುಸ್ವಾಮಿ ಎಂಬಾತನನ್ನು ಜತಿನ್ ಶರ್ಮಾ ಈ ಹಿಂದೆ ಭೇಟಿಯಾಗಿದ್ದನು. ಈ ವೇಳೆ ಆತನ ಮೊಬೈಲ್ ಫೋನ್ ಅನ್ನು ಬಳಸಿದ್ದ. "ಶರ್ಮ ತನ್ನ ಪತ್ನಿಯೊಂದಿಗೆ ಮಾತನಾಡಲು ಬಯಸುತ್ತೇನೆ ಎಂದು ಹೇಳುವ ಮೂಲಕ ಕಣ್ಣನ್ ನಿಂದ ಫೋನ್ ಎರವಲು ಪಡೆದಿದ್ದ, ಆದರೆ ಭಟ್ಕಳ ಠಾಣೆಗೆ ಇಮೇಲ್ ಮಾಡಿದ್ದಾನೆ ಎಂದು ಉತ್ತರ ಕನ್ನಡ ಎಸ್ಪಿ ಎಂ ನಾರಾಯಣ್ ಟಿಎನ್‌ಐಇಗೆ ತಿಳಿಸಿದ್ದಾರೆ.
ಆರೋಪಿ ಎರಡು ಇಮೇಲ್ ಕಳುಹಿಸಿದ್ದಾನೆ. ಬೆಳಿಗ್ಗೆ 7.22 ಕ್ಕೆ ಮೇಲ್ ಕಳುಹಿಸಿದ್ದ ಆರೋಪಿ 'ನಾವು ಪಟ್ಟಣದಲ್ಲಿ ಬಾಂಬ್ ಇಟ್ಟಿದ್ದೇವೆ' ಎಂದು ಒಂದು ಲೈನರ್‌ನಲ್ಲಿ ಬರೆದಿದ್ದ, ಎರಡನೇ ಇಮೇಲ್ ಬೆಳಿಗ್ಗೆ 7.23 ಕ್ಕೆ ಬಂದಿತ್ತು. ಇದು 24 ಗಂಟೆಗಳಲ್ಲಿ ಸ್ಫೋಟಗೊಳ್ಳುತ್ತದೆ' ಎಂದು ಬರೆದಿತ್ತು. ಪೊಲೀಸರು ಮೊಬೈಲ್ ಫೋನ್ ಅನ್ನು ಕಣ್ಣನ್ ಬಳಿ ಪತ್ತೆಹಚ್ಚಿದರು, ಅವನು ಮೈಸೂರಿನಲ್ಲಿ ಇದೇ ರೀತಿಯ ಅಪರಾಧಕ್ಕಾಗಿ ಮೈಸೂರು ಜೈಲಿನಲ್ಲಿರುವ ಶರ್ಮಾ ಎಂಬಾತನ ಬಗ್ಗೆ ಮಾಹಿತಿ ನೀಡಿದ್ದನು.
ಭಟ್ಕಳದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಜತಿನ್ ಶರ್ಮಾಗೆ ತನ್ನ ಲಿವ್-ಇನ್ ಪಾರ್ಟ್ನರ್ ಜೊತೆ ಸಮಸ್ಯೆಗಳಿದ್ದವು. ನೋಯ್ಡಾ ಪೊಲೀಸರು ಆತನನ್ನು ಬಂಧಿಸಿದ್ದರು. ನ್ಯಾಯಾಲಯವು ಶಿಕ್ಷೆ ವಿಧಿಸಿತು. ಈ ಘಟನೆಯ ನಂತರ ಅವನು ಪೊಲೀಸರ ವಿರುದ್ಧ ದ್ವೇಷ ಸಾಧಿಸುತ್ತಿದ್ದಾನೆ ಮತ್ತು ಅಂತಹ ಇಮೇಲ್‌ಗಳನ್ನು ಕಳುಹಿಸುತ್ತಿದ್ದಾನೆ ಎಂದು ತಿಳಿದುಬಂದಿದೆ.
ದ್ವೇಷದಿಂದ ಅವನು ಇದನ್ನು ಮಾಡುತ್ತಿದ್ದಾನೆ. ದೇಶಾದ್ಯಂತ ಬಾಂಬ್ ಬೆದರಿಕೆ ಹಾಕಿದ ಕನಿಷ್ಠ 20 ಪ್ರಕರಣಗಳನ್ನು ಅವನು ಎದುರಿಸುತ್ತಿದ್ದಾನೆ ಎಂದು ಎಸ್‌ಪಿ ನಾರಾಯಣ್ ಮಾಹಿತಿ ನೀಡಿದರು.
ಯಾರದ್ದೋ ಮೊಬೈಲ್ ಫೋನ್ ತೆಗೆದುಕೊಳ್ಳುವುದು, ಕಸಿದುಕೊಳ್ಳುವುದು ಅಥವಾ ಕದಿಯುವುದು ನಂತರ ಸಂದೇಶ ಕಳುಹಿಸುವುದು ಅವನ ಕಾರ್ಯ ವಿಧಾನವಾಗಿತ್ತು. ಅವನು ಯಾರ ಫೋನ್ ಬಳಸುತ್ತಾನೋ ಆ ವ್ಯಕ್ತಿಗೆ ಅದು ತಿಳಿದಿರುತ್ತಿರಲಿಲ್ಲ.
ನಾವು ಕಣ್ಣನ್ ಬಂಧಿಸಿದಾಗ, ಆರೋಪಿ ತನ್ನ ಮೊಬೈಲ್ ಫೋನ್ ಎರವಲು ಪಡೆದದ ಘಟನೆಯನ್ನು ಆತ ನೆನಪಿಸಿಕೊಂಡನು. ನಾವು ಮುನ್ನಾರ್ ಪೊಲೀಸರನ್ನು ಸಂಪರ್ಕಿಸಿದಾಗ, ಆರೋಪಿ ಮೈಸೂರು ಜೈಲಿನಲ್ಲಿದ್ದಾನೆ ಎಂದು ನಮಗೆ ತಿಳಿದುಬಂದಿತು. ಮುನ್ನಾರ್ ಪೊಲೀಸರು ವಿಚಾರಣೆಗಾಗಿ ಬಾಡಿ ವಾರಂಟ್ ಪಡೆದಿದ್ದರು. ನಾವು ಅವನನ್ನು ವಿಚಾರಣೆಗಾಗಿ ಕಾರವಾರಕ್ಕೆ ಕರೆತರುತ್ತೇವೆ ಎಂದು ಅವರು ಹೇಳಿದರು. ಆರೋಪಿ ಮೈಸೂರು ನಜರ್‌ಬಾದ್ ಪೊಲೀಸರಿಗೆ ಇಮೇಲ್ ಮೂಲಕ ಪೊಲೀಸ್ ಠಾಣೆಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ.