ಶಿವಮೊಗ್ಗ: ಶಿಷ್ಟಾಚಾರ ಉಲ್ಲಂಘನೆ ಮತ್ತು ಕಾರ್ಯಕ್ರಮವನ್ನು ರಾಜ್ಯ ಸಚಿವರು ಮತ್ತು ಶಾಸಕರು ಬಹಿಷ್ಕರಿಸಿದ್ದಾರೆ ಎಂಬ ಆರೋಪದ ನಡುವೆಯೇ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸೋಮವಾರ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾಗಿರುವ ದೇಶದ ಎರಡನೇ ಅತಿ ಉದ್ದದ ಮತ್ತು ರಾಜ್ಯದ ಅತಿ ಉದ್ದದ ಕೇಬಲ್ ಆಧಾರಿತ ಸೇತುವೆಯನ್ನು ಉದ್ಘಾಟಿಸಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅಂಬರಗೋಡ್ಲು ಮತ್ತು ಕಳಸವಳ್ಳಿ ಗ್ರಾಮಗಳ ನಡುವೆ 473 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಸೇತುವೆಯು, ಒಟ್ಟು 2.44 ಕಿ.ಮೀ. ಉದ್ದವಿದೆ.
ಹೊಸ ಸೇತುವೆಗೆ ಸಿಗಂದೂರು ಚೌಡೇಶ್ವರಿ ದೇವಿಯ ಹೆಸರನ್ನಿಟ್ಟ ಗಡ್ಕರಿ, ರಾಜ್ಯದಲ್ಲಿ ಕೈಗೆತ್ತಿಕೊಂಡಿರುವ ಮತ್ತು ಯೋಜಿಸಲಾಗಿರುವ ಹೆದ್ದಾರಿ ಯೋಜನೆಗಳನ್ನು ಪಟ್ಟಿ ಮಾಡಿದರು.
5 ಲಕ್ಷ ಕೋಟಿ ರೂ. ಮೌಲ್ಯದ ಈ ಯೋಜನೆಗಳು ಕೇಂದ್ರ ಸರ್ಕಾರದ ಅಧಿಕಾರಾವಧಿಯ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿವೆ ಎಂದು ಭರವಸೆ ನೀಡಿದರು.
2,041 ಕೋಟಿ ರೂ. ಮೌಲ್ಯದ ಒಂಬತ್ತು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ನಿತಿನ್ ಗಡ್ಕರಿಯವರು ಚಾಲನೆ ನೀಡಿ, ಶಂಕುಸ್ಥಾಪನೆ ನೆರವೇರಿಸಿದರು.
ಕರ್ನಾಟಕದಲ್ಲಿ ಈಗ ಸುಮಾರು 9,000 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳಿವೆ. 3 ಲಕ್ಷ ಕೋಟಿ ರೂ. ಮೌಲ್ಯದ ಯೋಜನೆಗಳು ಪ್ರಗತಿಯಲ್ಲಿವೆ ಮತ್ತು ಮುಂದಿನ ಐದು ವರ್ಷಗಳಲ್ಲಿ 5 ಲಕ್ಷ ಕೋಟಿ ರೂ. ಮೌಲ್ಯದ ಹೆಚ್ಚುವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ಯೋಜಿಸಿದೆ ಎಂದು ಹೇಳಿದರು.
ಜಿಲ್ಲೆಗಳನ್ನು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಯೋಜನೆಗಳಿವೆ. ಕರ್ನಾಟಕದ ಬೆಳವಣಿಗೆಗೆ ಬೆಂಬಲ ನೀಡಲು ಹೊಸ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಹಾಸನ ಮತ್ತು ರಾಯಚೂರು ನಡುವಿನ ನಾಲ್ಕು ಪಥದ ಹೆದ್ದಾರಿ ಈ ವರ್ಷದ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ, ಇದು ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಬೆಂಗಳೂರು ಮತ್ತು ಚೆನ್ನೈ ನಡುವಿನ ಹೊಸ ಹೆದ್ದಾರಿ ಸಿದ್ಧವಾಗಿದ್ದು, ಆರು ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.
ಹುಬ್ಬಳ್ಳಿ ಮತ್ತು ಧಾರವಾಡ ನಡುವಿನ ಹೆದ್ದಾರಿ ಶೇಕಡಾ 70 ರಷ್ಟು ಪೂರ್ಣಗೊಂಡಿದ್ದು, ಮುಂದಿನ ವರ್ಷ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ, ಇದು ಅವಳಿ ನಗರಗಳ ನಡುವಿನ ಪ್ರಯಾಣದ ಸಮಯವನ್ನು 15 ನಿಮಿಷಗಳಿಗೆ ಇಳಿಸುತ್ತದೆ. ಮೈಸೂರು-ಮಡಿಕೇರಿ ಮತ್ತು ಶಿರಾಡಿ ಘಾಟ್‌ನಲ್ಲಿ ರಸ್ತೆ ಕಾಮಗಾರಿಯೂ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.