ನವದೆಹಲಿ: 2023 ರಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ (ಕೋಮುಲ್) ನೇಮಕಾತಿಯಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಕೆ ವೈ ನಂಜೇಗೌಡ ಅವರ 1.32 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಗುರುವಾರ ತಿಳಿಸಿದೆ.
ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದ ಶಾಸಕ ನಂಜೇಗೌಡ ಅವರು ಕೋಮುಲ್‌ನ ಅಧ್ಯಕ್ಷರಾಗಿದ್ದಾರೆ.
ನೇಮಕಾತಿ ಪ್ರಕ್ರಿಯೆಯನ್ನು ಕೋಮುಲ್ ನಡೆಸಿದ್ದು, ಅದು ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ಒಳಗೊಂಡಿತ್ತು ಎಂದು ಇಡಿ ಹೇಳಿದೆ.
ಹಣ ಅಥವಾ ರಾಜಕೀಯ ವ್ಯಕ್ತಿಗಳ ಶಿಫಾರಸಿನ ಮೇಲೆ ನೇಮಕಾತಿ ನಡೆಸಲಾಗಿದೆ. ಪ್ರತಿಯೊಬ್ಬ ಅಭ್ಯರ್ಥಿಗೂ ಕೂಡ ರಾಜಕಾರಣಿಗಳ ಶಿಫಾರಸು ಪತ್ರ ನೀಡಲಾಗಿತ್ತು. ಇ.ಡಿ ದಾಳಿ ವೇಳೆ ಶಿಫಾರಸು ಪತ್ರ ಸಮೇತ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಂಜೇಗೌಡ ಮತ್ತು ಕೆ.ಎನ್. ಗೋಪಾಲ ಮೂರ್ತಿ(ಕೋಮುಲ್ ವ್ಯವಸ್ಥಾಪಕ ನಿರ್ದೇಶಕಿ) ನೇತೃತ್ವದ ನೇಮಕಾತಿ ಸಮಿತಿಯು ಸಂಸ್ಥೆಯ ಇತರ ನಿರ್ದೇಶಕರೊಂದಿಗೆ ಪಿತೂರಿ ನಡೆಸಿ, ಕೆಲವು ಅನರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಲಾಗಿದೆ. ಇದರಿಂದ ಅರ್ಹ ಅಭ್ಯರ್ಥಿಗಳು ಕೆಲಸದಿಂದ ವಂಚಿತರಾಗಿದ್ದಾರೆ ಎಂದು ಇಡಿ ಆರೋಪಿಸಿದೆ.
ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ನಂಜೇಗೌಡರ 1.32 ಕೋಟಿ ರೂ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ತಾತ್ಕಾಲಿಕ ಆದೇಶ ಹೊರಡಿಸಲಾಗಿದೆ ಎಂದು ಇಡಿ ತಿಳಿಸಿದೆ.
ಕೋಮುಲ್ ನೇಮಕಾತಿಯಲ್ಲಿ ಹಗರಣ ಸಂಬಂಧ ಸುಮಾರು 75 ಅಭ್ಯರ್ಥಿಗಳಿಂದ ಹಣ ಪಡೆದಿದ್ದಾರೆ. ಮಂಗಳೂರು ಯೂನಿವರ್ಸಿಟಿಯ ಸಿಬ್ಬಂದಿ ಜೊತೆಗೆ ಅವ್ಯಹಾರ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.