ಬೆಂಗಳೂರು: ರೌಡಿಶೀಟರ್ ಶಿವ ಪ್ರಕಾಶ್ ಅಲಿಯಾಸ್ ಬಿಕ್ಲ ಶಿವ ಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಗುರುವಾರ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರಿಗೆ ನೋಟಿಸ್ ನೀಡಿದ್ದಾರೆ.
ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಹಾಲಿ ಶಾಸಕ ಬೈರತಿ ಬಸವರಾಜು ಅವರಿಗೆ ಭಾರತಿ ನಗರ ಪೊಲೀಸರು ನೋಟಿಸ್ ನೀಡಿದ್ದು, ಕೊಲೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ನೋಟಿಸ್ ತಲುಪಿದ ಕೂಡಲೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದ್ದು, ಬೈರತಿ ಬಸವರಾಜ್ ಅವರ ಪುತ್ರ ನೀರಜ್ ಅವರು ನೋಟಿಸ್ ಸ್ವೀಕರಿಸಿದ್ದಾರೆ.
ಪೊಲೀಸ್ ನೋಟಿಸ್‌ನಿಂದ ಸದ್ಯ ಬೈರತಿ ಬಸವರಾಜ್ ಅವರಿಗೆ ಈಗ ಬಂಧನ ಭೀತಿ ಎದುರಾಗಿದೆ.
ಭಾರತಿ ನಗರದಲ್ಲಿ ಕಳೆದ ಮಂಗಳವಾರ ರಾತ್ರಿ ಶಿವ ಪ್ರಕಾಶ್ ನನ್ನು ಆತನ ತಾಯಿಯ ಎದುರೇ ಕೊಚ್ಚಿ ಕೊಲೆ ಮಾಡಲಾಗಿದೆ.
ಪ್ರಕರಣದ ಸಂಬಂಧ ಪೊಲೀಸರು ಇಂದು ಜಗದೀಶ್, ಕಿರಣ್, ವಿಮಲ್, ಅನಿಲ್ ಮತ್ತು ಫ್ರೆಡ್ರಿಕ್ ಅವರನ್ನು ಬಂಧಿಸಿ ನಗರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಅವರನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.