ಮೈಸೂರು: ರಾಜ್ಯದಲ್ಲಿ ಪಡಿತರ ಚೀಟಿದಾರರು ಇ- ಕೆವೈಸಿಯನ್ನು ಆದಷ್ಟು ಬೇಗನೆ ಮಾಡಿಸಬೇಕು. ಮಾಡಿಸದಿದ್ದರೆ ಅಂತಹ ಸದಸ್ಯರ ಪಡಿತರ ಕಾರ್ಡ್ ರದ್ದು ಪಡಿಸಲಾಗುವುದು ಎಂದು ಸಚಿವ ಕೆ.ಹೆಚ್. ಮುನಿಯಪ್ಪ ಅವರು ಸೂಚನೆ ನೀಡಿದ್ದಾರೆ.
ಮೈಸೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು ಅವರು, ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡಿಸಲು ಒಂದು ತಿಂಗಳು ಕಾಲಾವಕಾಶ ನೀಡಬೇಕು. ಆಗಲೂ ಇ-ಕೆವೈಸಿ ಮಾಡಿಸದೆ ಇದ್ದರೆ ಅಂತಹ ಸದಸ್ಯರ ಪಡಿತರ ಕಾರ್ಡ್ ರದ್ದು ಪಡಿಸುವ ಎಚ್ಚರಿಕೆ ನೀಡಿಬೇಕು. ಬಾಕಿ ಇರುವ ಇ-ಕೆವೈಸಿ ಪ್ರಕ್ರಿಯೆಗಳು ವಿಳಂಬವಿಲ್ಲದೆ ಪೂರ್ಣಗೊಳ್ಳುವಂತೆ ತಕ್ಷಣ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು.
ಅನಗತ್ಯವಾಗಿ ಕಾರ್ಡುಗಳು ವಿತರಣೆ ಆದರೆ, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಮಟ್ಟದಲ್ಲಿ ಜಾಗೃತಿ ಸಮಿತಿಗಳನ್ನು ರಚನೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾನೂನು ಮಾಪನ ಶಾಸ್ತ್ರ ಇಲಾಖೆಗೆ ಬೇಕಿರುವ ವಾಹನ ಸೌಲಭ್ಯ ಹಾಗೂ ಕಾನೂನು ಮಾಪನ ನಿರೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
ಆಹಾರ ಧಾನ್ಯಗಳು ಗೋದಾಮುಗಳಲ್ಲಿ ಹಾಳಾಗದಂತೆ ನೋಡಿಕೊಳ್ಳಿ. ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸುವ ಆಹಾರ ಧಾನ್ಯಗಳನ್ನು ಸುರಕ್ಷಿತವಾಗಿ ಸಂರಕ್ಷಣೆ ಮಾಡಬೇಕು ಎಂದೂ ಸೂಚನೆ ನೀಡಿದರು.
ಆಹಾರ ಸರಬರಾಜು, ಆಹಾರ ಗ್ರಾಹಕ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಯೋಜನಾ ಕಾರ್ಯಕ್ರಮ ಸಂಯೋಜನೆ ಹಾಗೂ ಸ್ಯಾಂಖಿಕ ಇಲಾಖೆಯ ಇಲಾಖೆಯ ಕಾರ್ಯದರ್ಶಿಗಳಾದ ಮನೋಜ್ ಜೈನ್ ಅವರು ಮಾತನಾಡಿ, ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಇಲಾಖೆಯ ಇತರ ಅಧಿಕಾರಿಗಳಿಗೆ ಹೆಚ್ಚುವರಿ ಪ್ರಭಾರ ನೀಡಿ, ಖಾಲಿ ಇರುವ ಆಹಾರ ನಿರೀಕ್ಷಕರ ಹುದ್ದೆಗಳಿಗೆ ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕರಿಗೆ ಪ್ರಭಾರ ನೀಡುವಂತೆ ಸೂಚನೆ ನೀಡಿದರು.