ಕಾದಂಬರಿಕಾರ ಡಾ. ಜಿ.‌ಬಿ. ಹರೀಶ online desk
ರಾಜ್ಯ

ಬೇಂದ್ರೆ ಕಾವ್ಯವನ್ನು ಕೊಲ್ಲುವ ಪ್ರಯತ್ನ ನಡೆದಿತ್ತೆನ್ನುವುದು ಬೇಸರ: ಕಾದಂಬರಿಕಾರ ಡಾ. ಜಿ.‌ಬಿ ಹರೀಶ

ಕವಿ‌ ಬರೆಯುವುದಷ್ಟೇ ಮುಖ್ಯವಾದುದು, ರಸಿಕರು ಅದನ್ನು ಉಳಿಸಿಕೊಳ್ಳುವುದು. ಸಂಸ್ಕ್ರತದಲ್ಲಿ ಐದಾರು ಕವಿಗಳನ್ನು ಮಹಾಕವಿ ಎಂದು ಉಳಿಸಿಕೊಂಡು ಬಂದಿದ್ದಾರೆ.

ಬೆಂಗಳೂರು: ಬೇಂದ್ರೆಯವರ ಕಾವ್ಯದ ಆಳಕ್ಕಿಳಿದು ಅರ್ಥ ಮಾಡಿಕೊಳ್ಳಲಾಗದೆ, ಬೇಂದ್ರೆ ಕಾವ್ಯದಲ್ಲಿ ಏನೂ ಇಲ್ಲ ಎಂದು ಕೊಲ್ಲುವ ಪ್ರಯತ್ನ ಕನ್ನಡ ಸಾರಸ್ವತ ಲೋಕದಲ್ಲಿ ನಡೆದಿದ್ದು ಬೇಸರದ ಸಂಗತಿ ಎಂದು ಕವಿ, ಕಾದಂಬರಿಕಾರ ಡಾ. ಜಿ.ಬಿ.‌ ಹರೀಶ ಹೇಳಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ಅಭಾಸಾಪ) ಬೆಂಗಳೂರು ದಕ್ಷಿಣ ಘಟಕದ ವತಿಯಿಂದ ಸುಬ್ರಹ್ಮಣ್ಯ ಪುರದ ರಾಜಾ ಗಾರ್ಡೇನಿಯಾ ಲೇಔಟ್‌ನ ಭಾರದ್ವಾಜ ಸಭಾಂಗಣದಲ್ಲಿ ಆಯೋಜಿಸಿದ್ದ ನಾಕುತಂತಿ ಷಷ್ಟ್ಯಬ್ದಿ ಸರಣಿಯ 'ನಾದ-6' ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೇಂದ್ರೆಯವರು ಗ್ರಾಮೀಣ ಸೊಗಡಿನಿಂದ ವೇದಗಳವರೆಗೆ ಎಲ್ಲ ವಿಚಾರಗಳನ್ನೂ ತಮ್ಮ ಕಾವ್ಯಗಳಲ್ಲಿ ತಂದಿದ್ದಾರೆ. ಆದರೆ ಬೇಂದ್ರೆಯವರನ್ನು ವಿಮರ್ಶೆ ಮಾಡಿದ ಅನೇಕರು ಅವರ ಕಾವ್ಯದ ಆತ್ಮವನ್ನು ಪ್ರವೇಶಿಸಿಯೇ ಇಲ್ಲ. ಕವಿಯನ್ನು ಮೇಲೆಮೇಲೆ ಅರ್ಥಮಾಡಿಕೊಂಡು ಮುಂದೆ ಹೋಗಿದ್ದಾರೆ. ಯಾವುದೇ ರಸಿಕ, ವಿಮರ್ಶಕರಿಗೆ ಕವಿಯ ದೃಷ್ಟಿ, ಕೃಪೆ ಸಿಕ್ಕರೆ ಮಾತ್ರ ಕಾವ್ಯ ಅರ್ಥವಾಗುತ್ತದೆ. ಇಲ್ಲದಿದ್ದರೆ ವಿಮರ್ಶೆಯ ಮೇಲೆ ವಿಮರ್ಶೆ ನಡೆಯುತ್ತದೆಯೇ ಹೊರತು ಆಳಕ್ಕೆ ಇಳಿಯುವುದಿಲ್ಲ. ಬರೆದ್ದದ್ದರಲ್ಲೇ ಏನೇನೋ ಕಲ್ಪನೆ ಮಾಡಿಕೊಂಡು ಆಹಾ ಓಹೋ ಎಂದು ಹೇಳುತ್ತಿದ್ದ ನವ್ಯ ಕವಿಗಳನ್ನು ಸ್ವತಃ ಬೇಂದ್ರೆ 'ಊಹೆ' ಕವನದಲ್ಲಿ ಟೀಕಿಸಿದ್ದಾರೆ. ವ್ಯರ್ಥವಾದ ಒಂದು ಕವನವನ್ನೂ ಬೇಂದ್ರೆಯವರು ಬರೆದಿಲ್ಲ.

ಬೇಂದ್ರೆಯವರ ಕವನದಲ್ಲಿ ಸತ್ವವಿಲ್ಲ ಎಂದು ಚಂದ್ರಶೇಖರ ಕಂಬಾರರು ಒಮ್ಮೆ ಬಾಷಣ ಮಾಡಿದ್ದರು. ಬೇಂದ್ರೆಯವರ ಕಾವ್ಯದಲ್ಲಿ ಸತ್ವವಿತ್ತು ಎನ್ನುವುದು ಅವರು ನಿಧನರಾದ ದಶಕದ ನಂತರವೂ ಅವರನ್ನು ಸ್ಮರಿಸುತ್ತಿರುವುದೇ ಸಾಕ್ಷಿ. ಕಂಬಾರರ ಸಾಹಿತ್ಯದಲ್ಲಿ ಸತ್ವ ಇದೆಯೇ ಇಲ್ಲವೇ ಎಂದು ಕಾಲವೇ ಉತ್ತರಿಸಲಿದೆ. ಹೀಗೆ ಅನೇಕ ಸಂದರ್ಭಗಳಲ್ಲಿ ಬೇಂದ್ರೆ ಕಾವ್ಯವನ್ನು ಕೊಲ್ಲುವ ಪ್ರಯತ್ನ ಕನ್ನಡದಲ್ಲಿ ನಡೆದದ್ದು ಬೇಸರದ ಸಂಗತಿ ಎಂದರು.

ಕವಿ‌ ಬರೆಯುವುದಷ್ಟೇ ಮುಖ್ಯವಾದುದು, ರಸಿಕರು ಅದನ್ನು ಉಳಿಸಿಕೊಳ್ಳುವುದು. ಸಂಸ್ಕ್ರತದಲ್ಲಿ ಐದಾರು ಕವಿಗಳನ್ನು ಮಹಾಕವಿ ಎಂದು ಉಳಿಸಿಕೊಂಡು ಬಂದಿದ್ದಾರೆ. ಆದರೆ ಕನ್ನಡದಲ್ಲಿ ಈ ರೀತಿಯ ಅಭ್ಯಾಸ ಕಡಿಮೆ. ಕೆಲವು ಭಾಷೆಗಳು ಉತ್ಪತ್ತಿಯಾಗಿ ಅನೇಕ ವರ್ಷಗಳ ನಂತರ ಕಾವ್ಯ ರಚನೆ ಆಗುತ್ತದೆ. ಆದರೆ ಕನ್ನಡದ ಆರಂಭದಿಂದಲೇ ಕವಿತೆ ರಚನೆಯಾಗಿದೆ. ಇಂತಹ ಭಾಷೆಯ ಸಾಹಿತ್ಯ, ‌ಅದರ ಕವಿಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಪ್ರಯತ್ನ ಆಗಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಡಾ.‌ಮಾರುತಿರಾಮ್ ಅವರಿಂದ ಬೇಂದ್ರೆ ಕಾವ್ಯಗಾಯನ ನಡೆಯಿತು. ಅಭಾಸಾಪ ಬೆಂಗಳೂರು ಮಹಾನಗರ ಅಧ್ಯಕ್ಷ ಎಂ.ಎಸ್.‌ ನರಸಿಂಹಮೂರ್ತಿ, ಬೆಂಗಳೂರು ದಕ್ಷಿಣ ಅಧ್ಯಕ್ಷ ಡಾ. ಭಾನು ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar polls: ಇಂಡಿಯಾ ಬಣದ ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್‌ ಘೋಷಣೆ; ಮುಖೇಶ್ ಸಹಾನಿ ಸೇರಿ ಇಬ್ಬರು ಉಪಮುಖ್ಯಮಂತ್ರಿ

Diwali : ಕ್ಯಾಲ್ಸಿಯಂ ಕಾರ್ಬೈಡ್ ಗನ್ ತಂದ ಆಪತ್ತು, 60 ಮಕ್ಕಳಿಗೆ ಗಾಯ; ಕಣ್ಣು ಕಳೆದುಕೊಂಡ 14 ಮಕ್ಕಳು! Video

ದೇವಾಲಯದ ಎದುರು ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಗೆ ಮೂತ್ರ ನೆಕ್ಕುವ ಶಿಕ್ಷೆ!

ಮೈಸೂರು: ಸಿಎಂ ತವರು ಕ್ಷೇತ್ರದಲ್ಲಿ ಅಕ್ರಮ ಲಿಂಗ ಪತ್ತೆ ಪರೀಕ್ಷೆ, ಹೆಣ್ಣು ಭ್ರೂಣ ಹತ್ಯೆ, ಐವರ ಬಂಧನ!

Biggboss kannada 12: 'S' ಪದ ಬಳಕೆ, ಅಶ್ವಿನಿಗೌಡ ವಿರುದ್ದ ದೂರು ದಾಖಲು!

SCROLL FOR NEXT