ಚಿತ್ರದುರ್ಗ: ಗೊತ್ತುಗುರಿಯಿಲ್ಲದವನೊಂದಿಗೆ ಪುತ್ರಿ ವಿವಾಹವಾಗಿದ್ದು, ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸುವ ತನ್ನ ಆಗ್ರಹಕ್ಕೆ ಪೊಲೀಸರು ಕಿವಿಗೊಡದ ಹಿನ್ನೆಲೆಯಲ್ಲಿ ಬೇಸತ್ತ ತಂದೆಯೊಬ್ಬ ಪೊಲೀಸ್ ಠಾಣೆ ಎದುರೇ ಆತ್ಮಹತ್ಯೆಗೆ ಶರಣಾಗಿದ್ದು, ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಲು ಪೊಲೀಸ್ ವರಿಷ್ಠಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ.
ಗಿಳಿಕೆನಹಳ್ಳಿಯ ರೈತ ಅಜ್ಜಯ್ಯ (54) ಭಾನುವಾರ ಹೊಳಲ್ಕೆರೆ ಪೊಲೀಸ್ ಠಾಣೆಯ ಮುಂದೆ ವಿಷ ಸೇವಿಸಿದ್ದರು. ಕೂಡಲೇ ಪೊಲೀಸರು ಆತನನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದ.
ಘಟನೆ ಬಳಿಕ ಕೆಂಡಾಮಂಡಲಗೊಂಡ ಗ್ರಾಮಸ್ಥರು, ಹಾಗೂ ಅಜ್ಜಯ್ಯನ ಕುಟುಂಬ ಸದಸ್ಯರು ಪೊಲೀಸ್ ಠಾಣೆ ಬಳಿ ಶವ ಇಟ್ಟು ಪ್ರತಿಭಟನೆ ನಡೆಸಿದರು. ಇದೇ ವೇಳೆ ಡಿವೈಎಸ್ಪಿ ಮೇಲೆಯೂ ದಾಳಿಗೆ ಯತ್ನಿಸಿದ್ದರು. ಬಳಿಕ ಪೊಲೀಸರು ಲಾಠಿಚಾರ್ಜ್ ಮಾಡಿದ್ದರು.
‘2ನೇ ವರ್ಷದ ಬಿಎ ಓದುತ್ತಿದ್ದ ಯುವತಿ ಜುಲೈ 12ರಂದು ಕಾಲೇಜಿನಿಂದ ವಾಪಸ್ ಬಂದಿರಲಿಲ್ಲ. ಜುಲೈ 13ರಂದು ಆಕೆಯ ತಾಯಿ ಪುಷ್ಪಾ ಹೊಳಲ್ಕೆರೆ ಠಾಣೆಗೆ ಹಾಜರಾಗಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದರು. ದೂರು ನೀಡುವ ವೇಳೆ ಯುವತಿಗೆ 19 ವರ್ಷವಾಗಿದೆ ಎಂದು ತಿಳಿಸಿದ್ದರು.
ಪ್ರಕರಣದ ಬೆನ್ನು ಹತ್ತಿದಾಗ ಯುವತಿ ಯುವಕನೊಬ್ಬನ ಜೊತೆ ಮದುವೆ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿತ್ತು. ಜುಲೈ 15ರಂದು ಠಾಣೆಗೆ ಹಾಜರಾದ ಜೋಡಿ ತಾವು ವಯಸ್ಕರಾಗಿದ್ದು, ಇಬ್ಬರೂ ಮದುವೆ ಮಾಡಿಕೊಂಡಿದ್ದೇವೆ ಎಂದು ಹೇಳಿಕೆ ದಾಖಲಿಸಿದರು.
ಆಧಾರ್ ಕಾರ್ಡ್, ಶಾಲಾ ದಾಖಲಾತಿಗಳ ಅನುಸಾರ ಇಬ್ಬರೂ ಪ್ರಾಪ್ತ ವಯಸ್ಕಾಗಿದ್ದರು. ಇದನ್ನು ಪರಿಗಣಿಸಿ ಠಾಣೆಯಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣವನ್ನು ಅಂತ್ಯಗೊಳಿಸಲಾಯಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಹೇಳಿದ್ದಾರೆ.
‘ಬಾಲ ನ್ಯಾಯ ಕಾಯ್ದೆ ಅನುಸಾರ ಯಾವುದೇ ಮಗುವಿನ ವಯಸ್ಸಿನ ಬಗ್ಗೆ ಗೊಂದಲಗಳು ಮೂಡಿದಾಗ ಶಾಲಾ ದಾಖಲಾತಿ, ಎಸ್‌ಎಸ್‌ಎಲ್‌ಸಿ ದಾಖಲಾತಿಯಲ್ಲಿರುವ ಜನ್ಮದಿನಾಂಕವನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಅದರಂತೆ ಹೊಳಲ್ಕೆರೆ ಠಾಣೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ತಿಳಿಸಿದರು.
‘ಜುಲೈ 18ರಂದು ಠಾಣೆಗೆ ಹಾಜರಾದ ಅಜ್ಜಯ್ಯ ದಾವಣಗೆರೆ ಮಹಾನಗರ ಪಾಲಿಕೆ ವಿತರಣೆ ಮಾಡಿರುವ ಜನನ ಪ್ರಮಾಣ ಪತ್ರ ತಂದು ಮಗಳಿಗೆ 18 ವರ್ಷವಾಗಲು ಇನ್ನೂ 2 ತಿಂಗಳು ಬಾಕಿ ಇದೆ. ಹೀಗಾಗಿ ಬಾಲಕಿಯನ್ನು ವಿವಾಹ ಮಾಡಿಕೊಂಡಿರುವ ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಅವರ ಮನವಿ ಆಲಿಸಿದ ಪೊಲೀಸರು ಎಸ್‌ಎಸ್‌ಎಲ್‌ಸಿ ದಾಖಲಾತಿ ಅನುಸಾರ ಯುವತಿ ಪ್ರಾಪ್ತ ವಯಸ್ಕರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕಾನೂನಾತ್ಮಕವಾಗಿ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದರೂ ಅಜ್ಜಯ್ಯ ಅವರು ಪೊಲೀಸ್ ಠಾಣೆ ಎದುರು ವಿಷ ಸೇವನೆ ಮಾಡಿದ್ದಾರೆ. ಜನನ ಪ್ರಮಾಣ ಪತ್ರವನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿಲ್ಲ. ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರೂ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ದುರದೃಷ್ಟಕರ ಎಂದಿದ್ದಾರೆ.
ಅಜ್ಜಯ್ಯ ಮೃತದೇಹದ ಅಂತ್ಯಕ್ರಿಯೆಗೆ ತೆರಳುವ ಸಂದರ್ಭದಲ್ಲಿ ಕೆಲವರು ಅವರ ಕುಟುಂಬ ಸದಸ್ಯರಿಗೆ ಪ್ರಚೋದನೆ ನೀಡಿ ಪೊಲೀಸ್ ಠಾಣೆ ಕಡೆಗೆ ಮೃತದೇಹ ತಂದು, ಪ್ರತಿಭಟನೆ ನಡೆಸಿದ್ದಾರೆ. ನಾನು ಕೂಡ ಸ್ಥಳಕ್ಕೆ ತೆರಳಿ ಘಟನೆಯ ವಿವರ ಪಡೆದುಕೊಂಡಿದ್ದೇನೆ. ಈಗಲೂ ಘಟನೆಯ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಜನನ ಪ್ರಮಾಣ ಪತ್ರ ಪರಿಶೀಲನೆಗಾಗಿ ಯುವತಿ ಜನಿಸಿದ ಆಸ್ಪತ್ರೆ ವಿವರಗಳನ್ನೂ ಪಡೆಯಲಾಗುತ್ತಿದೆ. ಪೊಲೀಸರಿಂದ ತಪ್ಪುಗಳಾಗಿದೆಯಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಹೇಳಿದರು.