ಮಂಗಳೂರು: ಹೆಣ್ಣು ಮಕ್ಕಳೆಂದರೆ ಹೊರೆ ಎಂಬ ಭಾವನೆ ಇದೀಗ ಮರೆಯಾಗುತ್ತಿದ್ದು, ಹೆಣ್ಣು ಮಕ್ಕಳ ಕುರಿತ ಪೋಷಕರ ಮನಸ್ಥಿತಿ ಬದಲಾಗುತ್ತಿದೆ. ಮುಖ್ಯವಾಗಿ ಅಲ್ಪಸಂಖ್ಯಾತ ಸಮುದಾಯದವರಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತಿದೆ. ಇದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಲಕಿಯರ ಕಾಲೇಜುಗಳಿಗೆ ಹೆಚ್ಚುತ್ತಿರುವ ಬೇಡಿಕೆಯೇ ಉದಾಹರಣೆಯಾಗಿದೆ.
ಈ ಬೇಡಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರವು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಪ್ರತಿನಿಧಿಸುತ್ತಿರುವ ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಎರಡು ಹೊಸ ಶಿಕ್ಷಣ ಸಂಸ್ಥೆಗಳನ್ನು ಮಂಜೂರು ಮಾಡಿದೆ.
ಅಲ್ಪಸಂಖ್ಯಾತರ ಇಲಾಖೆಯು 1ನೇ ತರಗತಿಯಿಂದ ಪದವಿ ಹಂತದವರೆಗೆ ಶಿಕ್ಷಣವನ್ನು ನೀಡುವ ಹೊಸ ಶೈಕ್ಷಣಿಕ ಸಂಕೀರ್ಣಕ್ಕೆ 17 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.
ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ ಕೋಣಾಜೆ-ಫಜೀರಿನಲ್ಲಿ ಈ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಹೆಚ್ಚುವರಿಯಾಗಿ, ವಕ್ಫ್ ಇಲಾಖೆಯು ಉಳ್ಳಾಲದಲ್ಲಿ ಬಾಲಕಿಯರ ಪಿಯು ಕಾಲೇಜನ್ನೂ ಕೂಡ ಅಭಿವೃದ್ಧಿಪಡಿಸುತ್ತಿದೆ. ಎರಡೂ ಸಂಸ್ಥೆಗಳು ಕ್ರಮವಾಗಿ ಅಲ್ಪಸಂಖ್ಯಾತ ಮತ್ತು ಅಲ್ಪಸಂಖ್ಯಾತೇತರ ವಿದ್ಯಾರ್ಥಿಗಳಿಗೆ 75:25 ಮೀಸಲಾತಿ ಅನುಪಾತವನ್ನು ಅನುಸರಿಸಲಿದೆ ಎಂದು ತಿಳಿದುಬಂದಿದೆ.
ಬಾಲಕರ ದಾಖಲಾತಿ ಸಂಖ್ಯೆ ಕಡಿಮೆ ಇದ್ದ ಕಾರಣ, ದೇರಳಕಟ್ಟೆಯ ಕೋ-ಎಜುಕೇಷನ್ ಸರ್ಕಾರಿ ಕಾಲೇಜನ್ನು ಕಳೆದ ವರ್ಷವಷ್ಟೇ ಬಾಲಕಿಯರಿಗೆ ಮಾತ್ರ ಮೀಸಲಾದ ಸಂಸ್ಥೆಯಾಗಿ ಪರಿವರ್ತಿಸಲಾಗಿತ್ತು.
2022-23ರಲ್ಲಿ 91ರ ಪೈಕಿ 41 ಬಾಲಕರು ಮಾತ್ರ ದಾಖಲಾತಿ ಪಡೆದಿದ್ದರು. ಇದರ ಬೆನ್ನಲ್ಲೇ ಶಾಸಕ ಖಾದರ್ ನೇತೃತ್ವದ ಕಾಲೇಜು ಅಭಿವೃದ್ಧಿ ಸಮಿತಿಯ ಪ್ರಸ್ತಾವನೆ ನಂತರ ಕಾಲೇಜನ್ನು ಬಾಲಕಿಯರಿಗೆ ಮೀಸಲಾದ ಶಿಕ್ಷಣ ಸಂಸ್ಥೆಯಾಗಿ ಪರಿವರ್ತಿಸಲಾಯಿತು. ಇದಕ್ಕೆ ಸ್ಥಳೀಯರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.
'ಹಿಜಾಬ್' ವಿವಾದದ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಲಕಿಯರಿಗೆ ಮೀಸಲಾದ ಕಾಲೇಜುಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ಮತ್ತು ಶಿಕ್ಷಕರು ಹೇಳಿದ್ದಾರೆ.
ಮಂಗಳೂರಿನ ಸರ್ಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲರು ಮಾತನಾಡಿ, ಸಾಮಾನ್ಯವಾಗಿ 10 ನೇ ತರಗತಿ ಮತ್ತು ಪಿಯುಸಿ ನಂತರ ಮುಸ್ಲಿಂ ಹುಡುಗಿಯರು ಶಾಲೆ ಬಿಡುವ ಪ್ರಮಾಣ ಹೆಚ್ಚಾಗುತ್ತದೆ. ಬಾಲಕಿಯರಿಗೆ ಮೀಸಲಾತ ಕಾಲೇಜು ಕೊರತೆ ಇದ್ದಾಗ ಈ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಕೋ-ಎಜುಕೇಷನ್ ಕಾಲೇಜುಗಳಿಗೆ ಸೇರ್ಪಡೆಗೊಳಿಸಲು ಪೋಷಕರು ಹಿಂಜರಿಯುತ್ತಾರೆಂದು ಹೇಳಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಮುಸ್ಲಿಂ ಸಂಸ್ಥೆಗಳು ಹಲವಾರು ಬಾಲಕಿಯರ ಕಾಲೇಜುಗಳನ್ನು ಸ್ಥಾಪಿಸಿದ್ದು, ಇದರ ಜೊತೆಗೆ ಸರ್ಕಾರಿ ಬಾಲಕಿಯರ ಕಾಲೇಜುಗಳಲ್ಲಿಯೂ ಮುಸ್ಲಿಂ ಬಾಲಕಿಯರ ದಾಖಲಾತಿ ಪ್ರಮಾಣ (ಶೇ. 25-30) ಏರಿಕೆಯಾಗಿರುವುದು ಕಂಡು ಬಂದಿದೆ.
ಇದು ಕೋ-ಎಜುಕೇಷನ್ (ಸಹ ಶಿಕ್ಷಣ) ಸರ್ಕಾರಿ ಕಾಲೇಜುಗಳಲ್ಲಿರುವ ದಾಖಲಾತಿ ಪ್ರಮಾಣಕ್ಕಿಂತಲೂ ಹೆಚ್ಚಿದೆ. ಹೀಗಾಗಿ, ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಗೆ ಬಾಲಕಿಯರಿಗಾಗಿ ಪ್ರತ್ಯೇಕ ಶಿಕ್ಷಣ ಸಂಸ್ಧೆಗಳನ್ನು ಮಂಜೂರು ಮಾಡಿದೆ.
ದಕ್ಷಿಣ ಕನ್ನಡದಲ್ಲಿ, ವಿಶೇಷವಾಗಿ ಅಲ್ಪಸಂಖ್ಯಾತರ ಪ್ರಾಬಲ್ಯವುಳ್ಳ ಪ್ರದೇಶಗಳಲ್ಲಿ ವಿದ್ಯಾರ್ಥಿನಿಯರಿಗೆ ಮಾತ್ರ ಮೀಸಲಿರುವ ಕಾಲೇಜುಗಳ ಏರಿಕೆಯಾಗುತ್ತಿದ್ದು, ಈ ಬೆಳವಣಿಗೆಯು ಸಾಮಾಜಿಕ ಬದಲಾವಣೆ, ಸಮುದಾಯ-ಚಾಲಿತ ಆದ್ಯತೆಗಳು ಮತ್ತು ವಿಶೇಷವಾಗಿ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗದಂತೆ ಮಾಡಲು ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಪ್ರತಿಬಿಂಬಿಸುತ್ತಿದೆ.
ರಾಜ್ಯ ಸರ್ಕಾರ 2024-25 ರ ಬಜೆಟ್'ನಲ್ಲಿ ವಕ್ಫ್ ಭೂಮಿಯಲ್ಲಿ 15 ಮಹಿಳಾ ಕಾಲೇಜುಗಳನ್ನು ಸ್ಥಾಪಿಸುವುದಾಗಿ ಘೋಷಿಸಿತ್ತು. 2025-26ಕ್ಕೆ ಇನ್ನೂ 16 ಕಾಲೇಜುಗಳನ್ನು ಸ್ಥಾಪಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಏತನ್ಮಧ್ಯೆ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಸರ್ಕಾರದ ನಿರ್ಧಾರವನ್ನು ಶಾಸಕ ಯು.ಟಿ.ಖಾದರ್ ಅವರು ಸಮರ್ಥಿಸಿಕೊಂಡಿದ್ದಾರೆ.
ಸಮುದಾಯದ ಅಗತ್ಯತೆಗಳು ಮತ್ತು ಶಿಕ್ಷಣದ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವ ಮಹತ್ವವನ್ನು ಶಾಸಕರು ಒತ್ತಿ ಹೇಳಿದ್ದಾರೆ.
ಯಾರಿಗೂ ಅವರ ಹೆಣ್ಣುಮಕ್ಕಳನ್ನು ಸಹ-ಶಿಕ್ಷಣ ಕಾಲೇಜುಗಳಿಗೆ ಕಳುಹಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ. ಬೇಡಿಕೆಗಳಿಗೆ ಅನುಗುಣವಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.