ಮಂಡ್ಯ: ಜೀವನೋಪಾಯ ಗಳಿಸಲು ಮತ್ತು ಉದ್ಯೋಗ ಸೃಷ್ಟಿಸಲು ಯುವಕರು ಆಹಾರ ಸಂಸ್ಕರಣಾ ವಲಯದಲ್ಲಿ ಸಾಹಸೋದ್ಯಮ ನಡೆಸಬೇಕೆಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಒತ್ತಾಯಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ನಡೆದ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಕುರಿತು ಅರಿವು ಮೂಡಿಸುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ರೈತರು, ಕೃಷಿ ಕುಟುಂಬದ ಯುವಕರು, ಉದ್ಯೋಗಕ್ಕಾಗಿ ಅಲೆದಾಡುತ್ತಿರುವವರಿಗೆ ಕಿರು ಉದ್ದಿಮೆ ಮಾದರಿಯಾಗಿದೆ. ಬೇರೆಯವರ ಎದುರು ಕೆಲಸಕ್ಕೆ ಅಂಗಲಾಚದೆ, ಅವಲಂಬಿತರಾಗದೆ, ಸ್ವಾವಲಂಬಿ ಜೀವನ ಕಂಡುಕೊಳ್ಳುವುದಕ್ಕೆ ಸಹಕಾರಿಯಾಗಿದೆ ಹೇಳಿದರು.
ಕೃಷಿಯತ್ತ ಎಷ್ಟು ಹತ್ತಿರ ಹೋಗುವಿರೋ ಅಷ್ಟು ಲಾಭವಿದೆ. ಯುವಕರು ಕೃಷಿಯ ಕಡೆ ಆಸಕ್ತರಾದಾಗ ಸ್ವಾವಲಂಬಿಗಳಾಗಿ ಜೀವನ ಸಾಗಿಸಬಹುದು. ಜಿಲ್ಲೆಯಲ್ಲಿ ಭತ್ತ, ಕಬ್ಬು, ತೆಂಗು, ರಾಗಿ, ಅಡಕೆ, ತರಕಾರಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಬೆಳೆದ ಕಚ್ಚಾ ಬೆಳೆಯನ್ನು ಮಾರಾಟ ಮಾಡುತ್ತಿದ್ದಾರೆಯೇ ವಿನಃ ಅದನ್ನು ಸಂಸ್ಕರಣೆ ಮಾಡಿ ಮಾರಾಟ ಮಾಡುತ್ತಿಲ್ಲ. ಇದರಿಂದ ವೈಜ್ಞಾನಿಕ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ ಎಂದರು.
ಸಾಮಾನ್ಯ ರೈತ ಕೃಷಿಯಲ್ಲಿ ತೊಡಗುವುದಕ್ಕೂ, ವಿದ್ಯಾವಂತರಾದವರು ತೊಡಗುವುದಕ್ಕೂ ವ್ಯತ್ಯಾಸವಿದೆ. ವಿದ್ಯೆಗೂ ವೃತ್ತಿಗೂ ಸಂಬಂಧವಿಲ್ಲ. ವಿದ್ಯೆ ಜ್ಞಾನಕ್ಕೆ ದಾರಿಯಾದರೆ ವೃತ್ತಿ ಜೀವನಕ್ಕೆ ದಾರಿಯಾಗಿದೆ. ಒಂದು ಎಕರೆ ಜಮೀನಿನಲ್ಲಿ ಕಡಿಮೆ ಖರ್ಚು, ಕಡಿಮೆ ಅವಧಿ, ಕಡಿಮೆ ನೀರಿನಲ್ಲಿ ಯಾವ ಬೆಳೆ ಬೆಳೆಯಬಹುದೆಂಬ ಬಗ್ಗೆ ವಿಜ್ಞಾನಿಗಳು, ಕೃಷಿ ವಿವಿ ಅಧಿಕಾರಿಗಳಿಂದ ತಿಳಿವಳಿಕೆ ಪಡೆದುಕೊಂಡು ಪ್ರಾಯೋಗಿಕವಾಗಿ ಪ್ರಯತ್ನಿಸಿದರೆ ಅದರಲ್ಲಿರುವ ಲಾಭದ ಅರಿವಾಗುತ್ತದೆ ಎಂದು ಸಲಹೆ ನೀಡಿದರು.
ಸರ್ಕಾರ 6,000 ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಪ್ರತಿ ಘಟಕದಿಂದ 50,000 ರಿಂದ 1 ಲಕ್ಷ ರೂಪಾಯಿಗಳವರೆಗೆ ಲಾಭ ಗಳಿಸಬಹುದು ಎಂದು ಅವರು ಹೇಳಿದರು ಮತ್ತು ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯದ ಸ್ಥಾಪನೆಯು ಈ ಪ್ರದೇಶದಲ್ಲಿ ಕೃಷಿಗೆ ಉತ್ತೇಜನ ನೀಡುತ್ತದೆ ಎಂದು ಅವರು ಭಾವಿಸಿದರು. ಕಿರು ಉದ್ದಿಮೆ ನಡೆಸುವ ರೈತರಿಗೆ ದೊಡ್ಡ ಪ್ರಮಾಣದಲ್ಲಿ ಸಬ್ಸಿಡಿಯನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿದೆ. ಒಟ್ಟು 15 ಲಕ್ಷ ರು. ಸಬ್ಸಿಡಿಯಲ್ಲಿ 9 ಲಕ್ಷ ರು. ಸಬ್ಸಿಡಿಯನ್ನು ರಾಜ್ಯ ಸರ್ಕಾರ ಭರಿಸಿದರೆ, 6 ಲಕ್ಷ ರು. ಸಬ್ಸಿಡಿಯನ್ನು ಮಾತ್ರ ಕೇಂದ್ರ ಭರಿಸುತ್ತಿದೆ.
ನೀವು ಬೆಳೆದ ಬೆಳೆಯನ್ನು ತಕ್ಷಣಕ್ಕೆ ಮಾರದೆ ಅದನ್ನು ಸಂಸ್ಕರಣೆ ಮಾಡಿ, ಬ್ರ್ಯಾಂಡ್ ರೂಪ ಕೊಡಿ. ವೈವಿಧ್ಯಮಯ, ನಾವಿನ್ಯತೆಯ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ನೀಡಿದರೆ ಅಧಿಕ ಲಾಭ ಸಂಪಾದಿಸಬಹುದು. ಬ್ಯಾಂಕಿನಿಂದ ಸಿಗುವ ಸಾಲ ಸೌಲಭ್ಯವನ್ನು ಬಳಸಿಕೊಂಡು ಜಿಲ್ಲೆಯ ಪ್ರತಿಯೊಂದು ಕುಟುಂಬವೂ ಸ್ವಾವಲಂಬಿಯಾಗಿ ಬದುಕಬೇಕು. ಕೃಷಿ ಪ್ರಧಾನ ಜಿಲ್ಲೆ ಮಂಡ್ಯ ಕೃಷಿ ಉತ್ಪನ್ನಗಳಲ್ಲಿ ವೈವಿಧ್ಯತೆಯನ್ನು ಮೆರೆಯುತ್ತಾ ಉತ್ತುಂಗ ಸ್ಥಾನಕ್ಕೇರಬೇಕೆಂಬ ಆಶಯ ವ್ಯಕ್ತಪಡಿಸಿದರು.