ಬೆಂಗಳೂರು: ಪರಿಶಿಷ್ಟ ಜಾತಿ (SC) ಪರಿಶಿಷ್ಟ ಪಂಗಡ (ST) ಮತ್ತು ಇತರ ಹಿಂದುಳಿದ ವರ್ಗಗಳಿಗೆ (OBCs) ಮೀಸಲಾಗಿಟ್ಟ ಭರ್ತಿಯಾಗದ ಹುದ್ದೆಗಳ ಮಾಹಿತಿಯನ್ನು ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಮರೆಮಾಚಲು ಪ್ರಯತ್ನಿಸುತ್ತಿದೆ ಎಂದು ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್ (CHRI) ನಿರ್ದೇಶಕ ಮತ್ತು ಆರ್‌ಟಿಐ ಕಾರ್ಯಕರ್ತ ವೆಂಕಟೇಶ್ ನಾಯಕ್ ಆರೋಪಿಸಿದ್ದಾರೆ.
ಜಾತಿ ಆಧಾರಿತ ಸಮಾನತೆ ಕುರಿತಾದ ರಾಷ್ಟ್ರೀಯ ಸಂವಾದದ ವೇಳೆ ದೇಶದ ದೇಶದ ಅಧಿಕಾರಶಾಹಿಯೊಳಗಿನ ಪಾರದರ್ಶಕತೆ ಮತ್ತು ವ್ಯವಸ್ಥಿತ ವೈಫಲ್ಯಗಳನ್ನು ನಾಯಕ್ ಬಹಿರಂಗಪಡಿಸಿದ್ದಾರೆ
ನಾಯಕ್ ಅವರು ಡಿಸೆಂಬರ್ 2024 ರ ಎಸ್‌ಸಿ, ಎಸ್‌ಟಿಗಳ ಕಲ್ಯಾಣ ಕುರಿತ ಸಂಸದೀಯ ಸಮಿತಿಯ ವರದಿಯನ್ನು ಆಧರಿಸಿ ಆರ್ ಟಿಐನಲ್ಲಿ ಪ್ರಶ್ನೆಗಳನ್ನು ಕೇಳಿದ್ದರು. ಇದರಲ್ಲಿ ಖಾಲಿ ಹುದ್ದೆಗಳಲ್ಲಿ ನಿರಂತರ ಹಿನ್ನಡೆ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು (PSUS) ಸಚಿವಾಲಯಗಳು ಮತ್ತು ಬ್ಯಾಂಕ್ ಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಹುದ್ದೆಗಳಲ್ಲಿ ಎಸ್‌ಸಿ, ಎಸ್ ಟಿ ಪ್ರಾತಿನಿಧ್ಯ ನೀಡದೆ ಇರುವುದಕ್ಕೆ ಸರ್ಕಾರವನ್ನು ತೀವ್ರವಾಗಿ ಟೀಕಿಸಿತ್ತು. ಸೂಕ್ತ ಅಭ್ಯರ್ಥಿಗಳಿಲ್ಲ ಎಂಬುದು ಆಧಾರ ರಹಿತ ಎಂದು ವರದಿ ನಿರಾಕರಿಸಿತ್ತು.
ಬ್ಯಾಕ್‌ಲಾಗ್ ಹುದ್ದೆಗಳ ಮಾಹಿತಿ ಮತ್ತು ಮೀಸಲಾತಿ ನೀತಿ ಜಾರಿಗೊಳಿಸಲು ಸಂಪರ್ಕಾಧಿಕಾರಿಗಳ ನೇಮಕಾತಿ ಕುರಿತು ನಾಯಕ್ ಅವರು ವಿವಿಧ ಇಲಾಖೆಗಳಿಂದ ಪ್ರಶ್ನೆ ಬಯಸಿದ್ದರು. ಆದರೆ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಿಂದಿನ ವರ್ಷಗಳ ಪ್ರಸ್ತುತವಲ್ಲದ ನೇಮಕಾತಿ ಅಂಕಿಅಂಶಗಳನ್ನು ನೀಡಿದ್ದು, ನಿರ್ದಿಷ್ಟ ಪ್ರಶ್ನೆಗಳನ್ನು ಪರಿಹರಿಸುವಲ್ಲಿ ವಿಫಲರಾಗಿದ್ದಾರೆ. ಇದು ರಾಜಕೀಯವಾಗಿ ಸೂಕ್ಷ್ಮ ಮಾಹಿತಿಯನ್ನು ಅಸ್ಪಷ್ಟಗೊಳಿಸುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ನಾಯಕ್ ಆರೋಪಿಸಿದ್ದಾರೆ.
ಬ್ಯಾಕ್ ಲಾಗ್ ಖಾಲಿ ಹುದ್ದೆಗಳ ಬಗ್ಗೆ ಮಾಹಿತಿಯನ್ನು ಹೊಂದಿರುವುದಿಲ್ಲ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಹೇಳಿದೆ. ಇದು ಅಧಿಕಾರಶಾಹಿ ವ್ಯವಸ್ಥೆಯ ನಿರ್ಲಕ್ಷ್ಯವಾಗಿದ್ದು, ಡಿಒಪಿಟಿ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದೆ ಎಂದು ನಾಯಕ್ ಆರೋಪಿಸಿದ್ದಾರೆ.
ಈ ಅಧಿಕಾರಿಗಳ ಸಂಖ್ಯೆ ಮತ್ತು ಸಮುದಾಯದ ಸ್ಥಿತಿ ಕುರಿತ ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡಿಲ್ಲ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಎಸ್ ಎಸ್ ಟಿ ಸಂಪರ್ಕಾಧಿಕಾರಿಗಳ ನೇಮಕಾತಿಯಲ್ಲಿ DoPT ನಿರ್ಲಕ್ಷ್ಯವಹಿಸಿದೆ ಎಂದು ನಾಯಕ್ ಆರೋಪಿಸಿದ್ದು, ಈ ವಿಚಾರವನ್ನು ಕೇಂದ್ರ ಮಾಹಿತಿ ಆಯೋಗದ ಗಮನಕ್ಕೆ ತರಲು ಸಿದ್ಧತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಮಾತನಾಡಿ, ‘ಒಬಿಸಿ, ಎಸ್‌ಸಿ, ಎಸ್‌ಟಿಗಳಿಗೆ ವರ್ಷದಿಂದ ವರ್ಷಕ್ಕೆ ಘೋರ ಅನ್ಯಾಯವಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಖಾಲಿ ಇರುವ ಈ ಹುದ್ದೆಗಳನ್ನು ಯಾವುದೇ ಸಕಾರಣವಿಲ್ಲದೆ ತಕ್ಷಣವೇ ಭರ್ತಿ ಮಾಡಬೇಕು’ ಎಂದರು. RDPR ಸಚಿವ ಪ್ರಿಯಾಂಕ್ ಖರ್ಗೆ, ‘ಕೇಂದ್ರ ಸರ್ಕಾರದ ಚಿಂತನೆಯ ಪ್ರಕ್ರಿಯೆಯಲ್ಲಿ ಸಮಸ್ಯೆ ಇದೆ ಅದನ್ನು ಮೊದಲು ಸರಿಪಡಿಸಬೇಕು’ ಎಂದು ಹೇಳಿದರು.