ಚಿತ್ರದುರ್ಗ: ಕುಟುಂಬಕ್ಕೆ ಕಳಂಕ, ಸಾಮಾಜಿಕ ಬಹಿಷ್ಕಾರದ ಭಯದಿಂದಾಗಿ ಮಹಿಳೆಯೊಬ್ಬರು ಎಚ್‌ಐವಿ ಸೋಂಕಿತ ಸಹೋದರನ ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆಯೊಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಮಲ್ಲಿಕಾರ್ಜುನ್ (23) ಎಂದು ಗುರ್ತಿಸಲಾಗಿದೆ. ಸಹೋದರಿ ನಿಶಾ ಹಾಗೂ ಭಾವ ಮಂಜುನಾಥ್ ಅವರೇ ಮಲ್ಲಿಕಾರ್ಜುನ ಅವರನ್ನು ಹತ್ಯೆ ಮಾಡಿದ್ದಾರೆಂದು ಹೇಳಲಾಗುತ್ತಿದೆ.
ಜುಲೈ 23 ರಂದು, ಮಲ್ಲಿಕಾರ್ಜುನ್ ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ತನ್ನ ಗ್ರಾಮಕ್ಕೆ ಹೋಗುತ್ತಿದ್ದಾಗ ಹಿರಿಯೂರು ತಾಲ್ಲೂಕಿನ ಐಮಂಗಲ ಬಳಿ ಅಪಘಾತಕ್ಕೀಡಾಗಿದ್ದರು. ಮಲ್ಲಿಕಾರ್ಜುನ್ ಅವರ ಕಾಲಿನಲ್ಲಿ ಮೂಳೆ ಮುರಿತ ಉಂಟಾಗಿ ಆರಂಭದಲ್ಲಿ ಚಿತ್ರದುರ್ಗದಲ್ಲಿ ಚಿಕಿತ್ಸೆ ನೀಡಲಾಯಿತು.
ನಂತರ ಅವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ನಿಯಮಿತ ರಕ್ತ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ಎಚ್‌ಐವಿ ಸೋಂಕಿತ ಎಂದು ತಿಳಿದುಬಂದಿದೆ. ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಆಸ್ಪತ್ರೆ ಅಧಿಕಾರಿಗಳು ಸೂಚಿಸಿದ್ದಾರೆ.
ಈ ವೇಳೆ ಆತನನ್ನು ಆಂಬ್ಯುಲೆನ್ಸ್‌ನಲ್ಲಿ ಇರಿಸಿ ಕರೆದೊಯ್ಯುತ್ತಿದ್ದಾಗ ಜೊತೆಗಿದ್ದ ಸಹೋದರಿ ನಿಶಾ ಮತ್ತು ಮಂಜುನಾಥ್ ಇಬ್ಬರೂ ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆಂದು ಹೇಳಲಾಗುತ್ತಿದೆ.
ಅಪಘಾತದಿಂದಾಗಿ ಮಲ್ಲಿಕಾರ್ಜುನ ಸಾವನ್ನಪ್ಪಿದ್ದಾನೆಂದು ಬಿಂಬಿಸಿದ ನಿಶಾ ಹಾಗೂ ಮಂಜುನಾಥ್ ಅಂತ್ಯಕ್ರಿಯೆಗಾಗಿ ಗ್ರಾಮಕ್ಕೆ ಮೃತದೇಹವನ್ನು ಸಾಗಿಸಿದ್ದಾರೆ. ಆದರೆ, ಗ್ರಾಮಸ್ಥರು ಕುತ್ತಿಗೆಯಲ್ಲಿದ್ದ ಗುರುತನ್ನು ಗಮನಿಸಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಬಳಿಕ ಮಲ್ಲಿಕಾರ್ಜುನ ತಂದೆ ನಾಗರಾಜ್ ಅವರು ಹೊಳಲ್ಕೆರೆ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಅನ್ವಯ ನಿಶಾಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.