ಬೆಂಗಳೂರು: ಬೀದಿ ನಾಯಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಬಿರಿಯಾನಿ ನೀಡುವ ಯೋಜನೆಗೆ ನಗರದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿರುವಂತೆಯೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೀದಿನಾಯಿಗಳ ಹಿಂಡು 68 ವರ್ಷದ ವೃದ್ಧ ವ್ಯಕ್ತಿಯನ್ನು ಕಚ್ಚಿ ಕೊಂದು ಹಾಕಿದೆ.
ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಟೆಲಿಕಾಮ್ ಲೇಔಟ್ ನಲ್ಲಿ ಈ ಭೀಕರ ಘಟನೆ ವರದಿಯಾಗಿದ್ದು, ಬೀದಿನಾಯಿಗಳ ದಾಳಿಗೆ 68 ವರ್ಷದ ಸೀನಪ್ಪ ಎಂಬುವವರು ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೂಲಗಳ ಪ್ರಕಾರ ಸೀನಪ್ಪ ಅವರು ಸೋಮವಾರ ಬೆಳಗ್ಗೆ ವಾಕಿಂಗ್ಗೆ ಹೋಗುತ್ತಿದ್ದಾಗ 8 ರಿಂದ 9 ಬೀದಿನಾಯಿಗಳು ದಾಳಿ ಮಾಡಿದ್ದು, ಕೈ, ಕಾಲಿನ ಅರ್ಧ ಮಾಂಸವನ್ನೇ ಕಚ್ಚಿ ತಿಂದಿವೆ. ಅಷ್ಟೇ ಅಲ್ಲದೆ ಮುಖಕ್ಕೂ ಕಚ್ಚಿವೆ. ನಾಯಿಗಳ ದಾಳಿಗೆ ವೃದ್ಧ ಸೀನಪ್ಪ ಕೊನೆಯುಸಿರೆಳೆದಿದ್ದಾರೆ.
"ಸೋಮವಾರ ಬೆಳಗಿನ ಜಾವ 3 ಗಂಟೆಗೆ ಸೀನಪ್ಪ ಕಂಬಳಿ ಸುತ್ತಿಕೊಂಡು ವಾಕಿಂಗ್ ಮಾಡುತ್ತಿದ್ದರು. ಕಂಬಳಿಯಲ್ಲಿ ಸುತ್ತಿಕೊಂಡು ಓಡಾಡುತ್ತಿದ್ದ ಅವರನ್ನು ನೋಡಿ ಬೀದಿ ನಾಯಿಗಳು ಮುಗಿಬಿದ್ದಿವೆ. ಸೀನಪ್ಪ ಅವರ ಕೈ ಮತ್ತು ಇತರ ಭಾಗಗಳನ್ನು ನಾಯಿಗಳು ಪದೇ ಪದೇ ಕಚ್ಚಿದವು. ಬಳಿಕ ಸ್ಥಳೀಯರ ಮಧ್ಯಪ್ರವೇಶದೊಂದಿಗೆ ನಾಯಿಗಳು ಅಲ್ಲಿಂದ ಪರಾರಿಯಾಗಿವೆ.
ಕೂಡಲೇ ಸೀನಪ್ಪ ಅವರನ್ನು ಯಲಹಂಕದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಅಲ್ಲಿ ಅವರು ಸತ್ತಿದ್ದಾರೆ ಎಂದು ವೈದ್ಯರು ಹೇಳಿದರು. ಪ್ರಸ್ತುತ ಸೀತಪ್ಪ ಶವವನ್ನು ಸಂಜಯ್ ನಗರದ ಖಾಸಗಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಬಿಡಿಸಲು ಯಾರಿಂದಲೂ ಆಗಲಿಲ್ಲ: ಸೊಸೆ ಅಳಲು
ನಿನ್ನೆ ಬೆಳಗ್ಗೆ ಮನೆಯಿಂದ ಎದ್ದು ವಾಕಿಂಗ್ ಹೋಗಿದ್ದರು. ದಿಢೀರ್ ಅಂತಾ ಹತ್ತು ನಾಯಿಗಳು ಕಚ್ಚಿವೆ. ಯಾರೂ ಕೂಡ ಅವರನ್ನ ಬಿಡಿಸುವುದಕ್ಕೆ ಆಗಿಲ್ಲ. ನಮ್ಮ ಮಾವನನ್ನ ನಾಯಿಗಳು ಕಚ್ಚಿ ಕಚ್ಚಿ ಸಾಯಿಸಿವೆ ಎಂದು ಸೊಸೆಯಂದಿರು ಅಳಲು ತೋಡಿಕೊಂಡಿದ್ದಾರೆ.
ಬಿಬಿಎಂಪಿ 1 ಲಕ್ಷ ರೂ. ಪರಿಹಾರ
ಬೀದಿನಾಯಿ ದಾಳಿಯಿಂದ ಮೃತಪಟ್ಟ ವೃದ್ಧ ಸೀನಪ್ಪ ಕುಟುಂಬಸ್ಥರಿಗೆ ಕೇವಲ 1 ಲಕ್ಷ ರೂ. ಪರಿಹಾರ ಕೊಡುವುದಾಗಿ ಬಿಬಿಎಂಪಿ ಮಾಹಿತಿ ನೀಡಿದೆ. 1 ಲಕ್ಷ ರೂ. ಪರಿಹಾರ ಕೊಡುತ್ತೇವೆ ಅಂತಾ ಬಿಬಿಎಂಪಿ ವಿಶೇಷ ಆಯುಕ್ತ ಸೂರಲ್ಕರ್ ವಿಕಾಸ್ ಕಿಶೋರ್ ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ ಯಲಹಂಕ ವಲಯದ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮನೋಹರ್ ಅವರು ಮಾತನಾಡಿ, ಸಂತ್ರಸ್ಥ ವ್ಯಕ್ತಿ ಸೀನಪ್ಪ ಮಾನಸಿಕವಾಗಿ ಸ್ವಲ್ಪ ಅಸ್ಥಿರನಾಗಿದ್ದ. ಅವರು ಬೇರೆ ಸಮಯದಲ್ಲಿ ಹೊರಗೆ ಹೋಗುತ್ತಾರೆ ಎಂದು ಕುಟುಂಬ ತಿಳಿಸಿದೆ. ವರದಿಯ ಆಧಾರದ ಮೇಲೆ, ಬಿಬಿಎಂಪಿ ನಿಯಮಗಳ ಪ್ರಕಾರ ಕುಟುಂಬ ಸದಸ್ಯರಿಗೆ 1 ಲಕ್ಷ ರೂ. ಪರಿಹಾರವನ್ನು ನೀಡಲಾಗುವುದು ಎಂದು ಡಾ. ಮನೋಹರ್ ಹೇಳಿದರು.
ನಾಯಿಗಳ ಮೇಲೆ ತೀವ್ರ ನಿಗಾ
ಇನ್ನು ಈ ಘಟನೆ ಬಳಿಕ ಕೆಲವು ಸಾರ್ವಜನಿಕರು ಭಯದಿಂದಾಗಿ ಬೀದಿ ನಾಯಿಗಳನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸುತ್ತಿದ್ದಾರೆ, ಆದರೆ ಪ್ರಾಣಿ ಜನನ ನಿಯಂತ್ರಣ ನಿಯಮಗಳು ಮತ್ತು ಇತರ ನಿಯಮಗಳ ಪ್ರಕಾರ, ಬೀದಿ ನಾಯಿಗಳನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗುವುದಿಲ್ಲ ಏಕೆಂದರೆ ಅದು ಪ್ರಾದೇಶಿಕ ಆಕ್ರಮಣ ಮತ್ತು ಬೀದಿ ನಾಯಿ ಕಡಿತದ ಹೆಚ್ಚಿನ ಘಟನೆಗಳಿಗೆ ಕಾರಣವಾಗಬಹುದು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಅಲ್ಲದೆ ಈ ಘಟನೆಯ ನಂತರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಸ್ಥಳದಿಂದ ಬೀದಿ ನಾಯಿಗಳನ್ನು ವಶಕ್ಕೆ ಪಡೆದು ಯಲಹಂಕದಲ್ಲಿ ಅವುಗಳ ಮೇಲೆ ನಿಗಾ ಇಟ್ಟಿದ್ದಾರೆ.
ಅಂದಹಾಗೆ ಕರ್ನಾಟಕದಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚಿವೆ. ನಾಯಿ ಕಡಿತ ಕೇಸ್ಗಳಲ್ಲಿ ತುಮಕೂರು ಮೊದಲನೇ ಸ್ಥಾನದಲ್ಲಿ. ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ 35ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳು ಅಟ್ಯಾಕ್ ಮಾಡಿವೆ. ನಾಯಿ ಕಡಿತ ಕೇಸ್ಗಳಲ್ಲಿ ತುಮಕೂರೇ ರಾಜ್ಯದಲ್ಲಿ ಮೊದಲಿಗಿದೆ. ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ 10 ಸಾವಿರ ಜನರಿಗೆ ನಾಯಿಗಳು ಕಡಿದಿವೆ. ಇದ್ರಲ್ಲಿ 5 ಜನರು ಸಾವನ್ನಪ್ಪಿದ್ದಾರೆ. ಇನ್ನು ಶಿರಾ ಒಂದರಲ್ಲೇ ನಾಯಿ ಕಡಿತಕ್ಕೆ 6 ತಿಂಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಬೆಂಗಳೂರಲ್ಲಿ ಹಿಡಿದ ನಾಯಿಗಳನ್ನು ತುಮಕೂರಿಗೆ ತಂದು ಬಿಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.