ಬೆಂಗಳೂರು: ಡಿಸೆಂಬರ್ 1ರ ಒಳಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಐದು ಪಾಲಿಕೆಗಳ ಚುನಾವಣೆಗೆ ಸಿದ್ಧತೆ ಪೂರ್ಣಗೊಳಿಸಲಾಗುವುದು. ಹೀಗಾಗಿ ಮತದಾರರ ಪಟ್ಟಿ ಸೇರಿದಂತೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪಕ್ಷದ ಮುಖಂಡರಿಗೆ ತಿಳಿಸಿದರು.
ಭಾರತ ಜೋಡೋ ಭವನದಲ್ಲಿ ಬುಧವಾರ ನಡೆದ ಬೆಂಗಳೂರು ವಲಯದ ನಾಯಕರು ಹಾಗೂ ಮುಖಂಡರ ಸಭೆಯಲ್ಲಿ ಶಿವಕುಮಾರ್ ಅವರು ಈ ವಿಚಾರ ತಿಳಿಸಿದರು. ನಿನ್ನೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳ ಸಭೆ ಮಾಡಿದ್ದು, ಬೆಂಗಳೂರು ಪಾಲಿಕೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರು ನಗರದ ಶಾಸಕರ ಜೊತೆ ಚರ್ಚೆ ಮಾಡಿ ಬೆಂಗಳೂರಿನಲ್ಲಿ ಐದು ಪಾಲಿಕೆ ರಚಿಸಲು ಮುಂದಾಗಿದ್ದು, ನಿನ್ನೆಯಿಂದ ಚುನಾವಣೆ ನಡೆಸುವ ತಯಾರಿ ಆರಂಭವಾಗಿದೆ. ನಾನು ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಪಾಲಿಕೆ ಚುನಾವಣೆ ಬಗ್ಗೆ ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಕೆ ಮಾಡಲಿದ್ದೇನೆ” ಎಂದು ಹೇಳಿದರು.
“ಡಿಸೆಂಬರ್ 1ರ ಒಳಗೆ ವಾರ್ಡ್ ಗಳ ಮರುವಿಂಗಡಣೆ, ಸಾರ್ವಜನಿಕರ ಆಕ್ಷೇಪ ಸೇರಿದಂತೆ ಎಲ್ಲಾ ಪ್ರಕ್ರಿಯೆ ಮುಗಿಸಲು ಸೂಚಿಸಿದ್ದೇನೆ. ಇದಕ್ಕೆ ಮತದಾರರ ಪಟ್ಟಿ ಕೂಡ ಸಿದ್ಧವಾಗಲಿದೆ. ಈ ಸಂದರ್ಭದಲ್ಲಿ ನೀವು ನಿಮ್ಮ ನಿಮ್ಮ ವಿಧಾನಸಭಾ ಕ್ಷೇತ್ರ, ವಾರ್ಡ್ ಹಾಗೂ ಬೂತ್ ಗಳಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು” ಎಂದು ಕರೆ ನೀಡಿದರು.
“ನಾನು ಈ ಸಭೆಗೆ ಬರುವ ಮುನ್ನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಎಲ್ಎಗಳ ನೇಮಕಕ್ಕೆ ಸಹಿ ಹಾಕಿ ಬಂದಿದ್ದೇನೆ. ಇದರಲ್ಲಿ ಯಾರೆಲ್ಲಾ ಆಸಕ್ತಿ ತೋರುತ್ತೀರಾ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಉತ್ಸಾಹ ಇದೆ, ಯಾರು ಆಸಕ್ತಿ ತೋರುವುದಿಲ್ಲ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಉತ್ಸಾಹವಿಲ್ಲ ಎಂದು ಪರಿಗಣಿಸಲಾಗುವುದು. ನಾವು ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಪ್ರತಿ ಬೂತ್ ನಲ್ಲಿ ಹೆಸರು ಸೇರಿಸುವ ಕೆಲಸ ಮಾಡಬೇಕು” ಸಂದೇಶ ರವಾನಿಸಿದರು.
“ಈ ಮಧ್ಯೆ ನಮ್ಮ ಸರ್ಕಾರ ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲಾ ಸಮುದಾಯಗಳ ಗಣತಿ ಮಾಡಲು ತೀರ್ಮಾನಿಸಿದ್ದು, ಪಕ್ಷದ ಆಚಾರ ವಿಚಾರವನ್ನು ನಮ್ಮ ಕಾರ್ಯಕರ್ತರು ಪ್ರಚಾರ ಮಾಡಬೇಕು. ಇದು ನನಗೆ ರಾಹುಲ್ ಗಾಂಧಿ ಅವರು ಕೊಟ್ಟಿರುವ ಧೀಕ್ಷೆ.
ಸಮೀಕ್ಷೆ ವಿಚಾರವಾಗಿ ಯಾರಿಗೂ ಅಸಮಾಧಾನವೂ ಬೇಡ ಎಂದು ಪಕ್ಷದ ನಾಯಕರು ತೀರ್ಮಾನಿಸಿದ್ದಾರೆ. ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವಿಚಾರದಲ್ಲಿ ಚರ್ಚೆ ಮಾಡಿ ಅದನ್ನು ಮರು ಸಮೀಕ್ಷೆ ಮಾಡಿದ್ದೇವೆ. ಬೆಂಗಳೂರು ನಗರ ಹೊರತಾಗಿ ಹೊರಗೆ ಸುಮಾರು 95%ರಷ್ಟು ಮಾಹಿತಿ ಸಂಗ್ರಹಿಸಲಾಗಿದೆ” ಎಂದು ತಿಳಿಸಿದ್ದಾರೆ.
“ಇನ್ನು ಜಾತಿ ಗಣತಿ ವಿಚಾರದಲ್ಲಿ ಎಲ್ಲರೂ ತಮ್ಮ ಹೆಸರು ನೋಂದಣಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪರಾಜಿತ ಅಭ್ಯರ್ಥಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಜಯಪ್ರಕಾಶ್ ಹೆಗಡೆ ಅವರ ನೇತೃತ್ವದ ಸಮಿತಿ ರಚಿಸಿದ್ದ ವರದಿ ಪರಿಶೀಲಿಸಿ ಎಲ್ಲಾ ಸಮಾಜದವರಿಗೆ ತಿಳುವಳಿಕೆ ಮೂಡಿಸಿ ನಾವು ಅವರಿಗೆ ಸಾಮಾಜಿಕವಾದ ನ್ಯಾಯ ಒದಗಿಸಿಕೊಡುತ್ತಿರುವ ಬಗ್ಗೆ ಅರಿವು ಮೂಡಿಸಬೇಕು.
ಒಬ್ಬ ವ್ಯಕ್ತಿ ವಿದೇಶದಲ್ಲಿ, ಹೊರ ರಾಜ್ಯದಲ್ಲಿ ಅಥವಾ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರೂ ಅವರ ಹೆಸರನ್ನು ಮೂಲ ನಿವಾಸದಲ್ಲಿ ನೋಂದಣಿ ಮಾಡಿಸಬೇಕು. ಆನ್ ಲೈನ್ ಅಥವಾ ಆಫ್ ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಎಲ್ಲಾ ಸಮಾಜಗಳಿಗೆ ನ್ಯಾಯ ಒದಗಿಸುವುದು ನಮ್ಮ ಪಕ್ಷದ ಮೂಲ ಉದ್ದೇಶ. ತೆಲಂಗಾಣ ಮಾದರಿಯಲ್ಲಿ ಸಮೀಕ್ಷೆ ನಡೆಸಲು ರಾಹುಲ್ ಗಾಂಧಿ ಅವರು ಸೂಚನೆ ನೀಡಿದ್ದು, ಇದಕ್ಕಾಗಿ ಒಂದು ತಂಡ ತೆಲಂಗಾಣಕ್ಕೂ ತೆರಳಲಿದೆ. ನಾವು 22ರಿಂದ ಇದರ ಕಾರ್ಯ ಆರಂಭಿಸಲಿದ್ದೇವೆ” ಎಂದು ತಿಳಿಸಿದರು.