ಬೆಂಗಳೂರು: ಹಿಂದುಳಿದ ವರ್ಗದ ಯುವ ಕೈಗಾರಿಕೋದ್ಯಮಿಗಳನ್ನು ಪ್ರೋತ್ಸಾಹಿಸಲು ಪ್ರತ್ಯೇಕ ನಿಧಿ ಸ್ಥಾಪಿಸಬೇಕೆಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವರಿಗೆ ಪತ್ರ ಬರೆದು ಈ ವಿಷಯದಲ್ಲಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
2015ರ ರಾಜ್ಯ ಸಮೀಕ್ಷೆಯ ಪ್ರಕಾರ, ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆ ಶೇಕಡಾ 70ರಷ್ಟಿದ್ದು, ಸುಮಾರು 4.42 ಕೋಟಿ ಜನರನ್ನು ಒಳಗೊಂಡಿದೆ. ಒಬಿಸಿ ವರ್ಗದಡಿ 1880 ಜಾತಿ ಮತ್ತು ಉಪಜಾತಿಗಳು ಸೇರಿವೆ. ಆದರೆ, ಈ ವರ್ಗದ ಯುವ ಕೈಗಾರಿಕೋದ್ಯಮಿಗಳಿಗೆ ಪ್ರತ್ಯೇಕ ಬಂಡವಾಳ ಅಥವಾ ಅನುದಾನ ವ್ಯವಸ್ಥೆ ಇಲ್ಲದಿರುವುದರಿಂದ, ಅವರು ಕೈಗಾರಿಕಾ ವಲಯದಿಂದ ದೂರವಾಗಿದ್ದಾರೆ ಎಂದು ಸಚಿವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರದ ಮಟ್ಟದಲ್ಲಿ ಪ್ರತ್ಯೇಕ ನಿಧಿ ಸ್ಥಾಪನೆ ಅನಿವಾರ್ಯ ಎಂದು ಅವರು ಒತ್ತಿಹೇಳಿದ್ದಾರೆ.
ಈ ಪ್ರತ್ಯೇಕ ನಿಧಿಗೆ ಸರ್ಕಾರದಿಂದ ಅನುದಾನ ಒದಗಿಸಬಹುದು ಮತ್ತು ಖಾಸಗಿ ವಲಯದ ಹೂಡಿಕೆದಾರರಿಂದಲೂ ಹೂಡಿಕೆಗೆ ಅವಕಾಶ ಕಲ್ಪಿಸಬಹುದು ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಈ ನಿಧಿಯಿಂದ ಹಿಂದುಳಿದ ವರ್ಗದ ಯುವ ಉದ್ಯಮಿಗಳಿಗೆ ನವೋದ್ಯಮ (ಸ್ಟಾರ್ಟ್‌ಅಪ್) ಆರಂಭಕ್ಕೆ ಅಗತ್ಯ ಬಂಡವಾಳ ಒದಗಿಸಬಹುದು ಎಂದು ಅವರು ವಿವರಿಸಿದ್ದಾರೆ. ಪ್ರತ್ಯೇಕ ನಿಧಿಯಿಂದ ಹಿಂದುಳಿದ ವರ್ಗದ ಯುವ ಉದ್ಯಮಿಗಳಿಗೆ ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಮುನ್ನಡೆಯಲು ಅವಕಾಶ ಸಿಗಲಿದೆ. ಇದರಿಂದ ಅವರು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಬಹುದು ಎಂಬ ಆಶಾಭಾವನೆಯನ್ನು ಸಚಿವರು ವ್ಯಕ್ತಪಡಿಸಿದ್ದಾರೆ.