ದಾವಣಗೆರೆ: ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯ ಪಾವತಿ ವಿಳಂಬದ ಬಗ್ಗೆ ಕರ್ನಾಟಕ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ನೀಡಿರುವ ಹೇಳಿಕೆಯೊಂದು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಹೌದು.. ಕರ್ನಾಟಕ ಕಾಂಗ್ರೆಸ್ ಸರ್ಕಾರದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಅಂದರೆ ಮನೆಯ ಹೆಣ್ಣುಮಕ್ಕಳಿಗೆ ಪ್ರತೀ ತಿಂಗಳು 2 ಸಾವಿರ ರೂ ನೀಡುವ ಯೋಜನೆ ಪದೇ ಪದೇ ವಿಳಂಬವಾಗುತ್ತಿದೆ. 2 ಸಾವಿರ ರೂಪಾಯಿ ಗೃಹಲಕ್ಷ್ಮಿ (Gruhalakshmi) ಹಣ ಫಲಾನುಭವಿ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಬರುತ್ತಿಲ್ಲ, ಇದಕ್ಕೆ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಗೃಹಲಕ್ಷ್ಮಿ ಹಣ ಬಿಡುಗಡೆ ವಿಳಂಬದ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮಾತನಾಡಿದ್ದು, 'ಗೃಹ ಲಕ್ಷ್ಮಿ ಹಣ ತಿಂಗಳು ತಿಂಗಳು ಕೊಡದಿದ್ರೆ ಆಕಾಶ ಕಳಚಿ ಬೀಳೋದಿಲ್ಲ' ಎಂದು ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಗೃಹಲಕ್ಷ್ಮಿ ಹಣ ವಿಳಂಬ ಆಗ್ತಿರೋ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಗೃಹಲಕ್ಷ್ಮಿ ಹಣ ಒಂದೇ ಸಲ ಬರ್ಬೇಕು ಅನ್ನೋದು ಸರಿಯಲ್ಲ, ತಿಂಗಳು ತಿಂಗಳು ಬರದೇ ಇದ್ರೆ ಏನು ಆಕಾಶ ಕಳಚಿಬೀಳುತ್ತಾ ಅಂತ ಪ್ರಶ್ನಿಸಿದ್ರು.
'ಜನರು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು. ಸರ್ಕಾರಿ ಪಾವತಿಗಳು ಒಂದು ಅಥವಾ ಎರಡು ತಿಂಗಳು ವಿಳಂಬವಾಗುವುದು ಸಾಮಾನ್ಯ ಮತ್ತು ನಂತರ ಹಣವನ್ನು ಒಂದೇ ಬಾರಿಗೆ ನೀಡಲಾಗುವುದು ಎಂದು ಅವರು ಹೇಳಿದರು.
"ದೊಡ್ಡ ವಿಷಯವೇನು? ಪ್ರತಿ ಎರಡು ಅಥವಾ ಮೂರು ತಿಂಗಳಿಗೊಮ್ಮೆ ಹಣವನ್ನು ನೀಡಿದರೆ ಏನಾಗುತ್ತದೆ? ಆಕಾಶ ಕಳಚಿ ಬೀಳುವುದಿಲ್ಲ. ಸರ್ಕಾರವು ಒಂದು ವ್ಯವಸ್ಥೆಯನ್ನು ಹೊಂದಿದೆ. ವಿಳಂಬವಾದಾಗ, ಪಾವತಿಗಳನ್ನು ಒಟ್ಟಿಗೆ ಸೇರಿಸಿ ಜಮಾ ಮಾಡಲಾಗುತ್ತದೆ. ಸಣ್ಣ ವಿಳಂಬಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಬೇಡಿ. ತಡವಾದರೂ ಸಹ, ನಾವು ಪಾವತಿಗಳನ್ನು ಪೂರ್ಣಗೊಳಿಸುತ್ತೇವೆ. ಅದರ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದು ಜಾರಕಿಹೊಳಿ ಮಾಧ್ಯಮಗಳಿಗೆ ಹೇಳಿದರು.
ಡಿಕೆ ಶಿವಕುಮಾರ್ ಮಾತು
ಇನ್ನು ಇದೇ ವಿಚಾರವಾಗಿ ಈ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಅವರೂ ಕೂಡ ಪ್ರತೀ ತಿಂಗಳು ಹಣ ಖಾತೆಗೆ ಹಾಕಲು ಸಾಧ್ಯವಿಲ್ಲ. ಪ್ರತಿ ತಿಂಗಳು ಹಣವನ್ನು ಜಮಾ ಮಾಡಲಾಗುವುದು ಎಂದು ಖಾತರಿಪಡಿಸಲು ಸಾಧ್ಯವಿಲ್ಲ. ತೆರಿಗೆ ರೂಪದಲ್ಲಿ ಬಂದ ಹಣವನ್ನು ಆಯಾ ಯೋಜನೆಗಳಿಗೆ ಬಳಸಲಾಗುತ್ತದೆ ಎಂದು ಹೇಳಿದ್ದರು.
ಈ ಹೇಳಿಕೆ ಕೂಡ ವ್ಯಾಪಕ ವೈರಲ್ ಆಗಿತ್ತು. ಈ ಹೇಳಿಕೆ ವೈರಲ್ ಆದ ಬೆನ್ನಲ್ಲೇ ಇದೀಗ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಕೂಡ ಇದೀಗ ವೈರಲ್ ಆಗುತ್ತಿದೆ.
ಅಂದಹಾಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ತಾನು ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದಂತೆ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿತ್ತು. ಈ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ, ಕಾಂಗ್ರೆಸ್ ಸರ್ಕಾರವು ಅರ್ಹ ಕುಟುಂಬಗಳ ಮಹಿಳಾ ಮುಖ್ಯಸ್ಥರಿಗೆ ಪ್ರತಿ ತಿಂಗಳು 2,000 ರೂ.ಗಳನ್ನು ನೀಡುವ ಭರವಸೆ ನೀಡಿತ್ತು.