ಬೆಳಗಾವಿ: ಮಸೀದಿಯೊಂದರಲ್ಲಿ ಇಸ್ಲಾಂ ಧರ್ಮದ ಪವಿತ್ರ ಕುರಾನ್ ಪುಸ್ತಕ ಕದ್ದೊಯ್ದು ಸುಟ್ಟು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಹಫಿಝ್–ಇ–ಕುರ್‌ಆನ್ ಯೂಥ್ ಕಮಿಟಿ ನೇತೃತ್ವದಲ್ಲಿ ಮುಸ್ಲಿಮರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಬೆಳಗಾವಿ ಪೊಲೀಸರು ಪ್ರಕರಣವನ್ನು ಪರಿಣಾಮಕಾರಿಯಾಗಿ ತನಿಖೆ ಮಾಡಲು ವಿಫಲವಾಗಿದ್ದು, ಬೆಳಗಾವಿ ಪೊಲೀಸ್ ಆಯುಕ್ತ ಇಯಾಡಾ ಮಾರ್ಟಿನ್ ಮಾರ್ಬನಿಯಾಂಗ್ ಅವರನ್ನು ಇದೇ ಕಾರಣಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಮುಸ್ಲಿಂ ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸುವುದು, ಈದ್ಗಾ ಮಿನಾರೆಟ್'ಗೆ ಹಾನಿ ಮಾಡುವುದು ಮತ್ತು ಸಮಾಧಿಗಳನ್ನು ಅಗೆಯುವುದು ಸೇರಿದಂತೆ ಮುಂತಾದ ಘಟನೆಗಳು ಇತ್ತೀಚಿನ ದಿನಗಳಲ್ಲಿ ಸಂತಿಬಸ್ತವಾಡದಲ್ಲಿ ನಡೆದಿದೆ. ಇದು ಅನ್ಯಾಯದ ಬೆಳವಣಿಗೆಗಳಾಗಿವೆ ಎಂದು ಪ್ರತಿಭಟನಾಕಾರರು ಹೇಳಿದರು.
ಇಂತಹ ಘಟನೆಗಳ ಹೊರತಾಗಿಯೂ ಪೊಲೀಸರು ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸುವಲ್ಲಿ ವಿಫಲರಾಗಿದ್ದಾರೆ, ಅಪರಾಧಿಗಳನ್ನು ಶಿಕ್ಷೆಗೆ ಒಳಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸಂತಿಬಸ್ತವಾಡದಲ್ಲಿ ಪವಿತ್ರ ಕುರಾನ್ ಸುಟ್ಟ ಪ್ರಕರಣದಲ್ಲಿ ಇದೂವರೆಗೂ ಯಾರನ್ನೂ ಬಂಧಿಸಿಲ್ಲ. ಅವರು ಯಾವ ಧರ್ಮಕ್ಕೆ ಸೇರಿದವರು ಎಂಬುದೂ ತಿಳಿದುಬಂದಿಲ್ಲ. ಪವಿತ್ರ ಕುರಾನ್ ಪುಸ್ತಕ ವಿಚಾರ ಬಂದರೆ, ಮುಸ್ಲಿಮರು ಇಂತಹ ದುಷ್ಕೃತ್ಯಕ್ಕೆ ಎಂದಿಗೂ ಕೈಹಾಕುವುದಿಲ್ಲ ಎಂದು ಹೇಳಿದರು.
ಇದೇ ವೇಳೆ ಸರ್ಕಾರಕ್ಕೆ ಮನವಿ ಸಲ್ಲಿಸಿದ ಅವರು, ಪೊಲೀಸರ ವಿಫಲತೆ ಹಾಗೂ ಘಟನೆ ನಡೆದು ಇಷ್ಟು ದಿನಗಳ ನಂತರವೂ ಯಾರೊಬ್ಬರನ್ನೂ ಬಂಧಿಸದ ಕುರಿತು ಪ್ರಶ್ನೆ ಮಾಡಿದರು.
ಘಟನೆ ವೇಳೆ ಮೂರು ದಿನಗಳ ಒಳಗಾಗಿ ಆರೋಪಿಗಳ ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ್ದರು. ಆದರೆ, ಮಾತು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆಂದು ಕಿಡಿಕಾರಿದರು.
ಸ್ಥಳೀಯ ಶಾಸಕರು ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದು, ಹೀಗಾಗಿ ತನಿಖೆ ವಿಳಂಬವಾಗುತ್ತಿದೆ. ಪೊಲೀಸರು ಕೂಡಲೇ ಆರೋಪಿಗಳನ್ನು ಬಂಧಿಸಿದಿದ್ದರೆ ಬೆಳಗಾವಿಯ ಪ್ರತೀ ಪ್ರದೇಶದಲ್ಲಿ ಪ್ರತಿಭಟನೆ ಭುಗಿಲೇಳಲಿದೆ ಎಂದು ಎಚ್ಚರಿಸಿದರು.