ಬೆಂಗಳೂರು: ಐಪಿಎಲ್ 2025 ಟ್ರೋಫಿ ಗೆದ್ದ ಆರ್‌ಸಿಬಿ ತಂಡಕ್ಕೆ ರಾಜ್ಯ ಸರ್ಕಾರದಿಂದ ನಡೆದ ಸನ್ಮಾನ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬುಧವಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಸಂಚಾರ ದಟ್ಟಣೆ ಎದುರಾಗಿ, ಪರ್ಯಾಯ ಮಾರ್ಗಳು ಸಿಗದೆ ಸವಾರರು ಸಮಸ್ಯೆ ಎದುರಿಸವಂತಾಯಿತು.
ವಿಧಾನಸೌಧ ಮತ್ತು ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಲೂ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಭಾರೀ ಸಂಚಾರ ದಟ್ಟಣೆ ಎದುರಾಗಿತ್ತು. ರಾತ್ರಿ 8ಗಂಟೆಯವರೆಗೂ ಜನರು ಸಂಚಾರ ದಟ್ಟಣೆ ಎದುರಿಸಿದ್ದರು.
ಬುಧವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಬೆಂಗಳೂರು ಸಂಚಾರ ಪೊಲೀಸರು ಸಂಚಾರ ಸಲಹೆಗಳನ್ನು ನೀಡಿದ್ದರು.
ಮಧ್ಯಾಹ್ನ 2 ಗಂಟೆಯಿಂದ, ವಿಶೇಷವಾಗಿ ವಿಧಾನಸೌಧ ಮತ್ತು ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ, ಅಭಿಮಾನಿಗಳು ರಸ್ತೆಗಳಲ್ಲಿ ಜಮಾಯಿಸಲು ಪ್ರಾರಂಭಿಸಿದಾಗ ರಸ್ತೆಗಳಲ್ಲಿ ನಿಧಾನಗತಿಯಲ್ಲಿ ಸಂಚಾರ ಸಮಸ್ಯೆ ಶುರುವಾಗಿತ್ತು. ಮಧ್ಯಾಹ್ನ 3 ಗಂಟೆಯ ಹೊತ್ತಿಗೆ, ಬಾಳೇಕುಂದ್ರಿ ವೃತ್ತದಿಂದ ಕೆಆರ್ ವೃತ್ತದವರೆಗೆ ವಾಹನ ಸವಾರರಿಗೆ ಸಮಸ್ಯೆ ಎದುರಾಯಿತು.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ರಾಜ್ಯ ಸರ್ಕಾರ ಆರ್‌ಸಿಬಿ ಆಟಗಾರರನ್ನು ಸನ್ಮಾನಿಸಲಾಗುತ್ತಿದ್ದ ವೇಳೆ ಲಕ್ಷಾಂತರ ಅಭಿಮಾನಿಗಳು ಡಾ. ಅಂಬೇಕ್ದಾರ್ ರಸ್ತೆಯಲ್ಲಿ ಕಿಕ್ಕಿರಿದು ತುಂಬಿದ್ದರು.
ವಿಧಾನಸೌಧದಲ್ಲಿ ಅಭಿನಂದನಾ ಕಾರ್ಯಕ್ರಮ ಪೂರ್ಣಗೊಳ್ಳುತ್ತಿದ್ದಂತೆಯೇ ಆರ್'ಸಿಬಿ ಆಟಗಾರರು ಬಸ್ ಗಳಲ್ಲಿ ತೆರಳಿದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮ ಇದ್ದ ಹಿನ್ನೆಲೆಯಲ್ಲಿ ಅಭಿಮಾನಿಗಳು ಒಮ್ಮೆಲೆ ಸ್ಟೇಡಿಯಂನತ್ತ ತೆರಳಿದರು. ಇದರಿಂದ ಪರಿಸ್ಥಿತಿ ಹದಗೆಟ್ಟಿತು.
ಬಳಿಕ ಪೊಲೀಸರು ಅನಿಲ್ ಕುಂಬ್ಳೆ ವೃತ್ತದಿಂದ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಕ್ಕೆ ಹೋಗುವ ರಸ್ತೆಗಳನ್ನು ಬಂದ್ ಮಾಡಿದರು.
ಇದು ಎಂಜಿ ರಸ್ತೆ, ವಿಟಲ್ ಮಲ್ಯ ರಸ್ತೆ ಮತ್ತು ಇತರ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರವನ್ನು ಮತ್ತಷ್ಟು ಹದಗೆಡಿಸಿತು.
ಅವ್ಯವಸ್ಥೆ ಹಿನ್ನೆಲೆಯಲ್ಲಿ ಜನರನ್ನು ತಡೆಯಲು ಕಬ್ಬನ್ ಪಾರ್ಕ್ ಮತ್ತು ವಿಧಾನಸೌಧದಲ್ಲಿನ ಮೆಟ್ರೋ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಯಿತು,
ಆಟೋರಿಕ್ಷಾ ಸೇವೆಗಳು ಹೆಚ್ಚಾಗಿ ಲಭ್ಯವಿರದ ಕಾರಣ ಅಭಿಮಾನಿಗಳು ಮತ್ತು ಪ್ರಯಾಣಿಕರು ಹತ್ತಿರದ ಲಭ್ಯವಿರುವ ಬಸ್ ನಿಲ್ದಾಣಗಳಿಗೆ ನಡೆದುಕೊಂಡು ಹೋಗಬೇಕಾಯಿತು. ಸಂಜೆ 6 ಗಂಟೆಯ ಸುಮಾರಿಗೆ ಜನರು ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಮತ್ತಷ್ಟು ತೀವ್ರಗೊಂಡಿತು.
ವಿಧಾನಸೌಧದ ಬಳಿ ಬಿಎಂಟಿಸಿ ಬಸ್‌ನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಾಗಿದ್ದ ಉಷ್ಮಾ ಎಸ್ ಎಂಬುವವರು ಮಾತನಾಡಿ, ಬಸ್ 20 ನಿಮಿಷಗಳಿಗೂ ಹೆಚ್ಚು ಕಾಲ ಚಲಿಸಿಲ್ಲ. ಪೊಲೀಸರು ಜನದಟ್ಟಣೆಯನ್ನು ನಿರ್ವಹಿಸುವಲ್ಲಿ ವಿಫಲರಾದರು. ಪೊಲೀಸರುಪರ್ಯಾಯ ಮಾರ್ಗಗಳನ್ನು ವ್ಯವಸ್ಥೆ ಮಾಡಬೇಕಾಗಿತ್ತು ಎಂದು ಕಿಡಿಕಾರಿದ್ದಾರೆ.
ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಬಂದಿದ್ದ ಖಾಸಗಿ ಕಾಲೇಜು ಪ್ರಾಧ್ಯಾಪಕ ಸುರೇಶ್ ಕೆ.ಎಸ್ ಅವರು ಮಾತನಾಡಿ, ಇದು ಸಂಪೂರ್ಣ ಅವ್ಯವಸ್ಥೆ. ಸರ್ಕಾರದ ಈ ನಿರ್ಧಾರ ಸಾಮಾನ್ಯ ಜನರಿಗೆ ಸಮಸ್ಯೆ ತಂದೊಡ್ಡಿದೆ. ಕೆಲಸಕ್ಕೆ ಹೋಗುವ ಪ್ರಯಾಣಿಕರಿಗೆ ಅಡ್ಡಿಯುಂಟು ಮಾಡಿದೆ ಎಂದು ಕಿಡಿಕಾರಿದ್ದಾರೆ.