ಬೆಂಗಳೂರು: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ಘಟನೆಯಾದ ಮೂರು ದಿನಗಳ ನಂತರ, ವಿಧಾನಸೌಧದ ಭದ್ರತಾ ಮುಖ್ಯಸ್ಥರು ಆರ್‌ಸಿಬಿ ಸನ್ಮಾನ ಕಾರ್ಯಕ್ರಮವನ್ನು ವಿರೋಧಿಸಿ ಬರೆದ ಪತ್ರ ಇದೀಗ ವೈರಲ್ ಆಗಿದೆ.
ರಾಜ್ಯ ಸರ್ಕಾರವನ್ನು ಉದ್ದೇಶಿಸಿ ಬರೆದ ಪತ್ರವು ಆರ್‌ಸಿಬಿ ಆಟಗಾರರಿಗೆ ಸನ್ಮಾನ ಮಾಡುವ ಕಾರ್ಯಕ್ರಮ ನಡೆಸುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ಮುಂಚಿತವಾಗಿ ಎಚ್ಚರಿಕೆ ನೀಡಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳ ವಿರೋಧದ ಹೊರತಾಗಿಯೂ, ಈ ಕಾರ್ಯಕ್ರಮವನ್ನು ನಡೆಸಲಾಯಿತು. ಇದರ ಪರಿಣಾಮವಾಗಿ ಇಬ್ಬರು ಅಪ್ರಾಪ್ತರು ಸೇರಿದಂತೆ 11 ಜನರು ಸಾವಿಗೀಡಾಗಿದ್ದರು ಮತ್ತು ಹಲವರು ಗಾಯಗೊಂಡರು.
ಜೂನ್ 4 ರಂದು ಉಪ ಪೊಲೀಸ್ ಆಯುಕ್ತ (ವಿಧಾನಸೌಧ ಭದ್ರತೆ) ಎಂಎನ್ ಕರಿಬಸವನ ಗೌಡ ಅವರು ಬರೆದ ಪತ್ರದಲ್ಲಿ, ಸಿಬ್ಬಂದಿ ಕೊರತೆ ಮತ್ತು ಜನಸಂದಣಿಯನ್ನು ನಿರ್ವಹಿಸುವಲ್ಲಿನ ಸವಾಲುಗಳ ಬಗ್ಗೆ ಎಚ್ಚರಿಸಿದ್ದಾರೆ.
ಹಿರಿಯ ಅಧಿಕಾರಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಜಿ ಸತ್ಯವತಿ ಮತ್ತು ಇತರ ಉನ್ನತ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ, 'ಆರ್‌ಸಿಬಿಗೆ ದೇಶದಾದ್ಯಂತ ಅಭಿಮಾನಿಗಳಿದ್ದಾರೆ ಮತ್ತು ನಾವು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮವನ್ನು ಆಯೋಜಿಸಿದರೆ, ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳು ಸೇರಬಹುದು. ಭದ್ರತಾ ಸಿಬ್ಬಂದಿ ಕೊರತೆಯಿರುವುದರಿಂದ, ಸರಿಯಾದ ಬಂದೋಬಸ್ತ್ ವ್ಯವಸ್ಥೆ ಮಾಡುವುದು ಸವಾಲಿನ ಕೆಲಸವಾಗಿರುತ್ತದೆ' ಎಂದು ಬರೆದಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಆರ್‌ಸಿಬಿ ಗೆಲುವಿನ ನಂತರ ನಗರದಲ್ಲಿನ ಸಂಭ್ರಮಾಚರಣೆ ನಡೆಯುತ್ತಿದ್ದ ಸ್ಥಳಗಳಲ್ಲಿ ಪೊಲೀಸರು ನಿಗಾವಹಿಸಿದ್ದರು ಮತ್ತು ಜೂನ್ 3ರ ಮಂಗಳವಾರ ಬೆಳಿಗ್ಗೆ 4 ಗಂಟೆಯವರೆಗೆ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿದ್ದರು. ಹೀಗಾಗಿ, ಅಲ್ಪಾವಧಿಯಲ್ಲಿ ಇಂತಹ ಭವ್ಯ ಕಾರ್ಯಕ್ರಮವನ್ನು ಆಯೋಜಿಸಲು ಈಗಾಗಲೇ ಪ್ರತಿರೋಧ ವ್ಯಕ್ತವಾಗಿತ್ತು.
ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತರಾದ ಬಿ ದಯಾನಂದ, ಹೆಚ್ಚುವರಿ ಪೊಲೀಸ್ ಆಯುಕ್ತ (ಪಶ್ಚಿಮ) ವಿಕಾಶ್ ಕುಮಾರ್ ವಿಕಾಶ್, ಉಪ ಪೊಲೀಸ್ ಆಯುಕ್ತ (ಕೇಂದ್ರ) ಶೇಖರ್ ಎಚ್ ಟಿ ಮತ್ತು ಇತರ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಇಬ್ಬರು ಪದಾಧಿಕಾರಿಗಳು ಸಹ ತಮ್ಮ ಕಾರ್ಯದರ್ಶಿ ಮತ್ತು ಖಜಾಂಚಿ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.