ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ಪ್ರಕರಣದ ನಂತರ RCB ಫ್ರಾಂಚೈಸಿ ಮಾರಾಟದ ವಿಷಯ ಮುನ್ನೆಲೆಗೆ ಬಂದಿದೆ.
RCB ತಂಡವನ್ನು ತಾವು ಖರೀದಿ ಮಾಡುತ್ತಾರೆ ಎಂಬ ವದಂತಿಗಳಿಗೆ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ನಾನೇನು ಹುಚ್ಚನಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಎಎನ್ಐ ಜೊತೆ ಮಾತನಾಡಿದ ಡಿಕೆ ಶಿವಕುಮಾರ್, ನಾನು ಹುಚ್ಚನಲ್ಲ. ನಾನು ರಾಯಲ್ ಚಾಲೆಂಜ್ ವಿಸ್ಕಿಯನ್ನೇ ಕುಡಿಯಲ್ಲ. ನನಗೇಕೆ RCB ಟೀಮ್ ಬೇಕು? RCB ಟೀಮ್ ಅನ್ನು ನಾನು ಖರೀದಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ಹಿಂದಿನಿಂದಲೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(KSCA)ಯ ಸದಸ್ಯ ಮಾತ್ರ. ಈ ಹಿಂದೆ ನನಗೆ ಕೆಎಸ್‌ಸಿಎ ಮ್ಯಾನೇಜ್‌ಮೆಂಟ್‌ಗೆ ಸೇರುವ ಆಫರ್ ಬಂದಿತ್ತು. ಆದರೆ ನನಗೆ ಸಮಯವಿಲ್ಲ. ನನಗೆ ಸಮಯವಿಲ್ಲದ ಕಾರಣ ನನ್ನ ಎಜುಕೇಷನ್ ಇನ್ಸ್‌ಟಿಟ್ಯೂಷನ್ ಅನ್ನು ನೋಡಿಕೊಳ್ಳಲು ನಮ್ಮ ಕುಟುಂಬದ ಬೇರೆ ಸದಸ್ಯರಿಗೆ ಬಿಟ್ಟಿದ್ದೇನೆ ಎಂದು ಹೇಳಿದ್ದಾರೆ.
ಜೂನ್ 4 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದಾರೆ ಮತ್ತು 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಈ ದುರಂತದ ಮಧ್ಯೆಯೇ ಕ್ರೀಡಾಂಗಣದ ಒಳಗೆ ಆರ್ ಸಿಬಿ ಆಟಗಾರರ ಜೊತೆ ಕಾಣಿಸಿಕೊಂಡಿದ್ದ ಡಿಕೆ ಶಿವಕುಮಾರ್ ಅವರು, ಐಪಿಎಲ್ ಟ್ರೋಫಿ ಎತ್ತಿ ಹಿಡಿದು, ಅದಕ್ಕೆ ಮುತ್ತಿಟ್ಟು ಸಂಭ್ರಮಿಸಿದ್ದರು.