ಬೆಂಗಳೂರು: ನಗರದ ಮಹಿಳೆಯೊಬ್ಬರು ತನ್ನ ಮಾಜಿ ಉದ್ಯೋಗದಾತನ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಬ್ಲ್ಯಾಕ್‌ಮೇಲ್ ಆರೋಪ ಮಾಡಿದ್ದಾರೆ. ಆರೋಪಿಯನ್ನು ಶ್ರೀನಿವಾಸ್ ಎಂ ಎಂದು ಗುರುತಿಸಲಾಗಿದ್ದು, ಆತನ ವಿರುದ್ಧ ಸುಲಿಗೆ ಮತ್ತು ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದಂತೆ ಪೊಲೀಸ್ ಪ್ರಕರಣ ದಾಖಲಾಗಿದೆ.
2019 ರಲ್ಲಿ ಪತಿಯಿಂದ ಬೇರ್ಪಟ್ಟ ನಂತರ ಬೆಂಗಳೂರಿನಲ್ಲಿ ಶ್ರೀನಿವಾಸ್ ನಡೆಸುತ್ತಿದ್ದ ಡಿಜಿಟಲ್ ಸೇವಾ ಕೇಂದ್ರದಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದೆ. ಕಾಲಕ್ರಮೇಣ ಇಬ್ಬರೂ ಹತ್ತಿರವಾಗಿದ್ದು,ಆರೋಪಿ ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ತದನಂತರ ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಕಾಡುಗೋಡಿಯಲ್ಲಿ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದೇವು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಅವಧಿಯಲ್ಲಿ ಆರೋಪಿ ವಿವಾಹದ ನೆಪದಲ್ಲಿ ಲೈಂಗಿಕವಾಗಿ ಕಿರುಕುಳ ನೀಡಿದ್ದು, ರಹಸ್ಯವಾಗಿ ತಮ್ಮ ಖಾಸಗಿ ವೀಡಿಯೊಗಳನ್ನು ರೆಕಾರ್ಡ್ ಮಾಡಿದ್ದಾರೆ. ಬಳಿಕ ಆ ವಿಡಿಯೋಗಳನ್ನು ಬಳಸಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಲು ಶುರು ಮಾಡಿದರು. ಇದರಿಂದ ಹೆದರಿ ಚಿನ್ನಾಭರಣ ಹಾಗೂ 1 ಲಕ್ಷ ರೂಪಾಯಿ ನೀಡಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ.
ಆಕೆ ದೂರು ನೀಡಿದ ನಂತರವೂ ಕಿರುಕುಳ ಮುಂದುವರಿದಿದೆ ಎಂದು ವರದಿಯಾಗಿದೆ. ಆರೋಪಿಯು ಆಕೆಯ ಹೆಸರಿನಲ್ಲಿ ನಕಲಿ ಸಾಮಾಜಿಕ ಮಾಧ್ಯಮ ಪ್ರೊಫೈಲ್ ಅನ್ನು ರಚಿಸಿದ್ದು, ಆಕೆಯ ಇಮೇಲ್ ಮತ್ತು ಫೋನ್ ನೋಂದಣಿ ವಿವರಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಹೆಚ್ಚಿನ ಹಣ ನೀಡದಿದ್ದರೆ ಖಾಸಗಿ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಡುವುದಾಗಿ ಆಕೆಯ ಸಂಬಂಧಿಕರೊಬ್ಬರಿಗೆ ಬೆದರಿಕೆ ಹಾಕಿದ್ದಾನೆ.
ಆರೋಪಿಯು ಆಕೆಯ ಕುಟುಂಬದವರ ಮನೆಗೆ ಭೇಟಿ ನೀಡಿ ಬೆದರಿಕೆ ಹಾಕಿದ ನಂತರಎರಡನೇ ದೂರು ದಾಖಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ.