ಬೆಂಗಳೂರು: ಸಿಗ್ನಲಿಂಗ್ ಸಮಸ್ಯೆಯಿಂದಾಗಿ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ ಉಂಟಾಗಿದ್ದು, ಪರಿಣಾಮ ವಾರಾಂತ್ಯದ ರಜೆ ಬಳಿಕ ಸೋಮವಾರ ಕೆಲಸ, ಕಚೇರಿ, ಕಾಲೇಜುಗಳಿಗೆ ಹೊರಟವರು ಸಮಸ್ಯೆ ಎದುರಿಸುವಂತಾಗಿದೆ.
ಪೀಕ್ ಅವರ್ ನಲ್ಲೇ ವ್ಯತ್ಯಯ ಎದುರಾಗಿದ್ದು, ನಮ್ಮ ಮೆಟ್ರೋ ಸಂಚಾರದ ಮೇಲೆ ಅವಲಂಬಿತರಾಗಿರುವ ಜನರು ಪೇಚಾಡುವಂತಾಗಿದೆ.
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ ಹಸಿರು ಹಾಗೂ ನೇರಳೆ ಬಣ್ಣದ ಇಂಟರ್‌ಚೇಂಜ್ ನಿಲ್ದಾಣವೂ ಆಗಿದ್ದು, ನಿಲ್ದಾಣದಲ್ಲಿ ಭಾರೀ ಜನ ದಟ್ಟಣೆ ಉಂಟಾಗಿದೆ.
ನಿಮಿಷ ನಿಮಿಷಕ್ಕೂ ನೂರಾರು ಪ್ರಯಾಣಿಕರ ದಟ್ಟಣೆ ಉಂಟಾಗಿ ಮೆಜೆಸ್ಟಿಕ್ ನಿಲ್ದಾಣದಲ್ಲಿ ಕಾಲಿಡಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿದುಬಂದಿದೆ.
ಸಿಗ್ನಲಿಂಗ್ ಸಮಸ್ಯೆಯಿಂದಾಗಿ ಸಂಚಾರದಲ್ಲಿ ವ್ಯತ್ಯಯ ಎದುರಾಗಿತ್ತು. ನೇರಳೆ ಮಾರ್ಗದಲ್ಲಿ ಸಿಗ್ನಲ್ ಸಮಸ್ಯೆಯಾಗಿತ್ತು. ಇದೀಗ ಎಲ್ಲವೂ ಸರಿ ಹೋಗಿದ್ದು ಸಹಜ ಸ್ಥಿತಿಗೆ ಮರಳುತ್ತಿದೆ. ಇದೀಗ ಮೆಟ್ರೋ ಕಾರ್ಯಾಚರಣೆ ಎಂದಿನಂತೆ ಇದೆ ಎಂದು ಬಿಎಂಆರ್'ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.