ರಾಜ್ಯ

News Headlines 17-06-25 | ಕರ್ನಾಟಕದಲ್ಲಿ Thug Life ರಿಲೀಸ್‌ಗೆ ಸುಪ್ರೀಂ ಕೋರ್ಟ್ ಅಸ್ತು; ಡಿ.ಕೆ ಸುರೇಶ್‌ಗೆ ED ಸಮನ್ಸ್; RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ!

ಕಾಂಗ್ರೆಸ್ ವಿರುದ್ಧ BJP ಪ್ರತಿಭಟನೆ: ರಾಜೀನಾಮೆ ಆಗ್ರಹ

ಕರ್ನಾಟಕದಲ್ಲಿ Thug Life ರಿಲೀಸ್‌ಗೆ 'ಸುಪ್ರೀಂ' ಅಸ್ತು

ತಮಿಳು ನಟ ಕಮಲ್ ಹಾಸನ್ ನಟಿಸಿರುವ ಥಗ್ ಲೈಫ್ ಚಿತ್ರದ ಪ್ರದರ್ಶನಕ್ಕೆ ನ್ಯಾಯಾಂಗೇತರ ನಿಷೇಧ ಹೊರಡಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಇಂದು ಕರ್ನಾಟಕ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರನ್ನೊಳಗೊಂಡ ಪೀಠ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಬುಧವಾರದೊಳಗೆ ಸರ್ಕಾರ ತನ್ನ ಅಫಿಡವಿಟ್ ಸಲ್ಲಿಸುವಂತೆ ನಿರ್ದೇಶಿಸಿದೆ. ಗೂಂಡಾಗಳ ಗುಂಪು, ಯಾವ ಸಿನಿಮಾ ಪ್ರದರ್ಶಿಸಬೇಕು, ಯಾವುದು ಪ್ರದರ್ಶಿಸಬಾರದು ಎಂಬುದನ್ನು ನಿರ್ಧರಿಸಲಾಗದು. ಕಮಲ್ ಹಾಸನ್ ಹೇಳಿಕೆಯನ್ನು ಒಪ್ಪುವುದು ಬಿಡುವುದು ಕರ್ನಾಟಕದ ಜನರಿಗೆ ಬಿಟ್ಟ ವಿಷಯ. ಯಾವುದೇ ಸಿನಿಮಾ CBFC ಯಿಂದ ಪ್ರಮಾಣ ಪತ್ರ ಪಡೆದರೆ ಅದು ಬಿಡುಗಡೆ ಆಗಬೇಕು. ಚಿತ್ರಮಂದಿರಗಳಿಗೆ ಭದ್ರತೆ ನೀಡಿ. ಆ ಸಿನಿಮಾವನ್ನು ನೋಡೊದು ಬಿಡೋದು ಜನ ನಿರ್ಧಾರ ಮಾಡುತ್ತಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ನ್ಯಾಯಾಲಯದ ಆದೇಶಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, "ನಾವು ಸುಪ್ರೀಂ ಕೋರ್ಟ್ ಆದೇಶವನ್ನು ಗೌರವದಿಂದ ಪಾಲಿಸಬೇಕು. ಪ್ರತಿಯೊಬ್ಬರಿಗೂ ಮಿತಿಗಳಿವೆ. ನಮಗೆ ನಮ್ಮ ಮಿತಿಗಳಿರಬೇಕು ಎಂದು ನಾನು ವಿವಿಧ ಸಂಘಟನೆಗಳಿಗೆ ಮನವಿ ಮಾಡುತ್ತೇನೆ." "ಎಲ್ಲಾ ಕನ್ನಡ ಕಾರ್ಯಕರ್ತರಿಗೆ ನಾನು ಮನವಿ ಮಾಡುತ್ತೇನೆ, ದಯವಿಟ್ಟು ಶಾಂತವಾಗಿರಿ, ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು" ಎಂದು ಹೇಳಿದರು.

ಡಿಕೆ ಸುರೇಶ್‌ಗೆ ED ಸಮನ್ಸ್

ಮಾಜಿ ಸಂಸದ ಡಿಕೆ ಸುರೇಶ್ ಸಹೋದರಿ ಎಂದು ಹೇಳಿಕೊಂಡು ಐಶ್ವರ್ಯಾ ಗೌಡ ಕೋಟಿ ಕೋಟಿ ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಡಿಕೆ ಸುರೇಶ್ಗೂ ಸಂಕಷ್ಟ ಶುರುವಾಗಿದೆ. ಡಿಕೆ ಸುರೇಶ್ ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಜೂನ್ 19ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದರು. ಆದರೆ ಜೂನ್ 23ಕ್ಕೆ ವಿಚಾರಣೆಗೆ ಬರುವುದಾಗಿ ಡಿಕೆ ಸುರೇಶ್ ಹೇಳಿದ್ದಾರೆ ಎಂದು ತಿಳಿದುಬಂದಿದೆ. ವಾರಾಹಿ ವರ್ಲ್ಡ್‌ ಆಫ್‌ ಗೋಲ್ಡ್‌ ಜುವೆಲ್ಲರಿಯ ಮಾಲೀಕರಿಂದ 9 ಕೋಟಿ ರೂಪಾಯಿ ಮೌಲ್ಯದ ಚಿನ್ನ ಖರೀದಿಸಿ ವಂಚಿಸಿದ್ದಾರೆ ಎಂಬ ಆರೋಪ ಐಶ್ವರ್ಯ ಗೌಡ ಮೇಲಿದೆ. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ PMLA ಪ್ರಕರಣದಲ್ಲಿ ಬೆಂಗಳೂರಿನ 1ನೇ CCH ನ್ಯಾಯಾಲಯ ಐಶ್ವರ್ಯಾ ಗೌಡಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದಿದ್ದ ಕಾಲ್ತುಳಿತ ಪ್ರಕರಣ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈವರೆಗೂ ಕೈಗೊಂಡ ಕ್ರಮದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವುದಕ್ಕೆ ಹೈಕೋರ್ಟ್ ಇಂದು ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಕಾಲ್ತುಳಿತ ಪ್ರಕರಣ ಸಂಬಂಧ ಸ್ವಯಂಪ್ರೇರಿತ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರ ಪೀಠ, ತನಿಖಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಒತ್ತಿಹೇಳಿತು. ಇದಕ್ಕೆ ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ಅವರು, ಸರ್ಕಾರವು ಬಹಿರಂಗಪಡಿಸುವಿಕೆಯಿಂದ ಹಿಂದೆ ಸರಿಯುತ್ತಿಲ್ಲ, ಆದರೆ ನಡೆಯುತ್ತಿರುವ ವಿಚಾರಣೆಗಳ ಮೇಲೆ ಪೂರ್ವಾಗ್ರಹ ಪೀಡಿತವಾಗುವುದನ್ನು ತಪ್ಪಿಸಲು ಬಯಸಿದೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

RCB ವಿಜಯೋತ್ಸವದ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಇಂದು ಪ್ರತಿಭಟನೆ ನಡೆಸಿದಲ್ಲದೆ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿತು. ಹೀಗಾಗಿ ಪೊಲೀಸರು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಶಾಸಕ ಅಶ್ವಥ್ ನಾರಾಯಣ ಸೇರಿದಂತೆ ಹಲವು ನಾಯಕರನ್ನು ವಶಕ್ಕೆ ಪಡೆದರು. ಅನಂತರ, ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಬಿಜೆಪಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಂತಾಪ ಸೂಚಿಸುವ ಸಭೆ ನಡೆಸಿತು. ಈ ಕಾರ್ಯಕ್ರಮದ ಸಂದರ್ಭದಲ್ಲಿ, ಆಡಳಿತ ವೈಫಲ್ಯವನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾಜೀನಾಮೆ ನೀಡಬೇಕೆಂದು ಬಿಜೆಪಿ ನಾಯಕರು ಒತ್ತಾಯಿಸಿದರು. ಇನ್ನು ಬಿಜೆಪಿ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ನಮ್ಮ ರಾಜೀನಾಮೆ ಕೇಳುವ ಮೊದಲು ಇಂತಹದ್ದೇ ಅವಘಡಗಳು ನಡೆದಿದ್ದ ಸಂದರ್ಭದಲ್ಲಿ ರಾಜೀನಾಮೆ ನೀಡಿದ್ದ ಬಿಜೆಪಿ ನಾಯಕರ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ರಾಜ್ಯದ ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗುಜರಾತ್: SIR ಬಳಿಕ ಕರಡು ಮತದಾರರ ಪಟ್ಟಿ ಪ್ರಕಟ, 73.73 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರು ಡಿಲೀಟ್!

5ನೇ T20: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 30 ರನ್ ಗಳ ರೋಚಕ ಜಯ; 3-1 ಸರಣಿ ಗೆಲುವು

Load shedding In bangalore: ಡಿ.20 ರಂದು ನಗರದ ಈ ಏರಿಯಾಗಳಲ್ಲಿ ಬೆಳಿಗ್ಗೆಯಿಂದ ಸಂಜೆ ವರೆಗೂ ವಿದ್ಯುತ್ ಕಡಿತ

ಬೇಡಿಕೆ ಈಡೇರಿದೆ, ನನ್ನ-ಸಿಎಂ ನಡುವೆ ಒಪ್ಪಂದವಾಗಿದೆ; ಹೈಕಮಾಂಡ್ ಅವರ ಪರ ಇರೋದ್ರಿಂದಲೇ ಅವರು ಸಿಎಂ: ಡಿ.ಕೆ ಶಿವಕುಮಾರ್

1,000 ಕೋಟಿ ಬೆಟ್ಟಿಂಗ್ ಆ್ಯಪ್ ತನಿಖೆ: ಯುವರಾಜ್ ಸಿಂಗ್, ಉತ್ತಪ್ಪ, ಮಿಮಿ ಚಕ್ರವರ್ತಿ, ಸೋನು ಸೂದ್ ಆಸ್ತಿ ಮುಟ್ಟುಗೋಲು!

SCROLL FOR NEXT