ಬೆಂಗಳೂರು: ಶೇ.100% ಫಲಿತಾಂಶಕ್ಕಾಗಿ ನಗರದ ಶಾಲೆಯೊಂದು ಆಡಿದ್ದ ಕಳ್ಳಾಟ ಇದೀಗ ಬಟಾ ಬಯಲಾಗಿದ್ದು, ಓದಿನಲ್ಲಿ ಹಿಂದಿದ್ದ 10 ವಿದ್ಯಾರ್ಥಿನಿಯರನ್ನು ಅವರ ಪೋಷಕರಿಗೇ ಅರಿವಿಲ್ಲದಂತೆ ಬೇರೊಂದು ಶಾಲೆಗೆ ನೊಂದಾಯಿಸಿರುವ ಅಘಾತಕಾರಿ ಘಟನೆ ಬಯಲಾಗಿದೆ.
ಸುದ್ದಿಮಾಧ್ಯಮವೊಂದು ಈ ಪ್ರತಿಷ್ಠಿತ ಶಾಲೆಯ ಕಳ್ಳಾಟ ಬಯಲಿಗೆಳೆದಿದ್ದು ಶಾಲೆಯ ಸ್ವಾರ್ಥಕ್ಕೆ ಇದೀಗ 10 ವಿದ್ಯಾರ್ಥಿನಿಯರ ಭವಿಷ್ಯಕ್ಕೇ ಕುತ್ತು ಎದುರಾಗಿದೆ.
ಹೌದು.. ವಸಂತ ನಗರದ ಪ್ರತಿಷ್ಠಿತ ಸೇಂಟ್ ಮೇರಿಸ್ ಗರ್ಲ್ಸ್ ಹೈಸ್ಕೂಲ್ (St. Mary’s Girls High School) ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ವಿರುದ್ದ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ.
100% ಫಲಿತಾಂಶಕ್ಕಾಗಿ ಸಾಧಾರಣವಾಗಿ ಓದುವ ವಿದ್ಯಾರ್ಥಿಗಳನ್ನು ಅವರ ಪೋಷಕರ ಗಮನಕ್ಕೂ ಬಾರದೆ ಅನಾಥ ಮಕ್ಕಳು ಎಂದು ಸರ್ಕಾರಿ ಶಾಲೆಯಲ್ಲಿ ಅಡ್ಮಿಷನ್ ಮಾಡಿಸಿರುವ ಗಂಭೀರ ಆರೋಪ ಶಾಲೆ ವಿರುದ್ಧ ಕೇಳಿಬಂದಿದೆ.
ಪೋಷಕರ ಆರೋಪವೇನು?
ಈ ಶಾಲೆಯಲ್ಲಿ ಹಿಂದೂ ಮಕ್ಕಳಿಗೆ ತಾರತಮ್ಯ ತೋರಲಾಗುತ್ತಿದೆ ಎಂದು ಶಾಲಾ ಮಂಡಳಿ ವಿರುದ್ಧ ಮಕ್ಕಳು ಹಾಗೂ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಮಕ್ಕಳಿಗೆ ಈ ರೀತಿ ಮಾಡಲ್ಲ. ಹಿಂದೂ ಮಕ್ಕಳಿಗೆ ಈ ರೀತಿ ಮಾಡುತ್ತಾರೆ ಎಂದು ಆರೋಪಿಸಲಾಗಿದ್ದು, ಇವರಿಂದಾಗಿ ಮಕ್ಕಳ ಭವಿಷ್ಯ ಹಾಳಾಯ್ತು ಎಂದು ಅಳಲು ತೊಡಿಕೊಂಡಿದ್ದಾರೆ.
ಇಷ್ಟಕ್ಕೂ ಆಗಿದ್ದೇನು?
ಸೇಂಟ್ ಮೇರಿಸ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಮಾರು 10 ಮಕ್ಕಳಿಗೆ ಅವರ ಪೋಷಕರ ಅನುಮತಿ ಇಲ್ಲದೇ ಸರ್ಕಾರಿ ಶಾಲೆಯಲ್ಲಿ ಅಡ್ಮಿಷನ್ ಮಾಡಲಾಗಿದೆ. ಮಕ್ಕಳಿಗೆ ಸರ್ಕಾರಿ ಶಾಲೆ ಸಮವಸ್ತ್ರ ಹಾಕಿ ಫೋಟೋ ಸಹ ತೆಗೆದುಕೊಂಡಿದ್ದಾರೆ. ನಂತರ ಪರೀಕ್ಷೆ ಸಮಯದಲ್ಲಿ ಹಾಲ್ ಟಿಕೆಟ್ ನೀಡಿ ಸರ್ಕಾರಿ ಶಾಲೆಯಲ್ಲಿ ಪರೀಕ್ಷೆ ಬರೆಸಲಾಗಿದೆ. ಆದರೆ ಪರೀಕ್ಷೆಯಲ್ಲಿ ಪಾಸ್ ಆಗಲು ಶಾಲೆಯ ಇಂಟರ್ನಲ್ ಮಾರ್ಕ್ ಕಡ್ಡಾಯ. ಆದರೆ ಮಕ್ಕಳು ಶಾಲೆಗೇ ಹಾಜರಾಗಿಲ್ಲ ಎಂದು ಹೇಳಿ ಸರ್ಕಾರಿ ಶಾಲೆಯ ಆಡಳಿತ ಮಂಡಳಿ ಮಕ್ಕಳಿಗೆ ಇಂಟರ್ನಲ್ ಮಾರ್ಕ್ಸ್ ನೀಡಿಲ್ಲ. ಹೀಗಾಗಿ ಪರೀಕ್ಷೆ ಬರೆದ ಮಕ್ಕಳಿಗೆ ಇಂಟರ್ನಲ್ಸ್ ಅಂಕ ಸಿಗದೇ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ.
ಪೋಷಕರ ತನಿಖೆ ವೇಳೆ ಆಘಾತಕಾರಿ ಮಾಹಿತಿ, ಶಾಲೆಯ ಕಳ್ಳಾಟ ಬಯಲು
ಇನ್ನು ತಮ್ಮ ಮಕ್ಕಳೇಕೆ ಫೇಲ್ ಆಗಿದ್ದಾರೆ ಎಂಬು ಪೋಷಕರು ಪರಿಶೀಲಿಸಿದಾಗ ಶಾಲೆಯ ಕಳ್ಳಾಟ ಬಯಲಾಗಿದೆ. ಶುಲ್ಕ ಕಟ್ಟಿರುವ ಪೋಷಕರು ತಮ್ಮ ಮಕ್ಕಳನ್ನು ಸೇಂಟ್ ಮೇರಿಸ್ ಶಾಲೆಗೆ ಕಳಿಸಿದ್ದಾರೆ. ಆದರೆ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಇದೆ.
ಈ ವಿಚಾರ ಪೋಷಕರ ಗಮನಕ್ಕೂ ಬಂದಿಲ್ಲ. ಇತ್ತ ಶಾಲೆಗೆ ಬಂದಿಲ್ಲ ಎಂದು ಸರ್ಕಾರಿ ಶಾಲೆಯಲ್ಲಿ ಇಂಟರ್ನಲ್ಸ್ ಅಂಕ ನೀಡಿರಲಿಲ್ಲಾ ಎಂಬುದು ಪತ್ತೆಯಾಗಿದೆ. ನಂತರ ಪೋಷಕರು ಶಾಲೆ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇದೀಗ ಎಫ್ಐಆರ್ ದಾಖಲಾಗಿದೆ. ಸೂಕ್ತ ಕಾನೂನು ಕ್ರಮಕ್ಕೆ ಪೋಷಕರು ಆಗ್ರಹಿಸಿದ್ದಾರೆ.
ಶೇ.100ರಷ್ಟು ಫಲಿತಾಂಶಕ್ಕಾಗಿ ಮಕ್ಕಳ ಭವಿಷ್ಯಕ್ಕೇ ಕುತ್ತು?
ಇನ್ನು ಸೇಂಟ್ ಮೇರಿಸ್ ಶಾಲೆಯ ನಗರದ ಪ್ರತಿಷ್ಛಿತ ಶಾಲೆಗಳಲ್ಲಿ ಒಂದು.. ಆದರೆ ಈ ಶಾಲೆ ಶೇ.100ರಷ್ಟು ಫಲಿತಾಂಶ ಪಡೆಯಲು ತನ್ನ ಶಾಲೆಯಲ್ಲಿ ಓದಿನಲ್ಲಿ ಹಿಂದಿದ್ದ ಮಕ್ಕಳನ್ನು ಬೇರೊಂದು ಶಾಲೆಗೆ ಅಡ್ಮಿಷನ್ ಮಾಡಿಸಿ ಕಳ್ಳಾಟವಾಡಿದೆ ಎಂದು ಪೋಷಕರು ಆರೋಪಿಸಿದ್ದಾರೆ.