ಬೆಂಗಳೂರು: ರಾಜ್ಯದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಂತೆ ತಪಾಸಣೆ ಹಾಗೂ ಸುರಕ್ಷತೆ ಉತ್ತೇಜಿಸುವ ಕ್ರಮಗಳನ್ನೂ ಕೂಡ ಹೆಚ್ಚಿಸಬೇಕಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಾರಿಗೆ ಇಲಾಖೆಗೆ 40 ಮಹಿಂದ್ರಾ ಬೊಲೆರೊ ವಾಹನಗಳನ್ನು ಬುಧವಾರ ಹಸ್ತಾಂತರ ಮಾಡಿದೆ.
ಬುಧವಾರ ಹೊಸ ವಾಹನಗಳನ್ನು ಸಾರಿಗೆ ಇಲಾಖೆಗೆ ಹಸ್ತಾಂತರಿಸಿ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿಯವರು, ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯನ್ನು ಮೇಲ್ವಿಚಾರಣೆ ಮಾಡಲು, ನಿಯಮಿತ ತಪಾಸಣೆ ನಡೆಸಲು, ರಸ್ತೆ ಸುರಕ್ಷತೆಯನ್ನು ಉತ್ತೇಜಿಸಲು ಮತ್ತು ಅಪಘಾತಗಳನ್ನು ತಡೆಗಟ್ಟಲು, ಸಾರಿಗೆ ಇಲಾಖೆಗೆ 40 ವಾಹನಗಳನ್ನು ಖರೀದಿಸಿ, ಹಸ್ತಾಂತರಿಸಿದ್ದೇವೆಂದು ಹೇಳಿದರು.
ರಾಜ್ಯದಲ್ಲಿ ಮೇ ಅಂತ್ಯದವರೆಗೆ ಒಟ್ಟು 3.37 ಕೋಟಿ ವಾಹನಗಳ ನೋಂದಣಿಯಾಗಿವೆ. ಅದರಲ್ಲಿ 1.24 ಕೋಟಿ ಬೆಂಗಳೂರು ನಗರದಲ್ಲಿಯೇ ಇವೆ. ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಮೋಟಾರು ವಾಹನ ನಿರೀಕ್ಷಕರ ಸಂಖ್ಯೆಯೂ ಹೆಚ್ಚಳವಾಗಬೇಕು. ತಪಾಸಣೆಗಳೂ ಹೆಚ್ಚಾಗಬೇಕು. ಅದಕ್ಕಾಗಿ ಈಗಾಗಲೇ 129 ನಿರೀಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಾರಿಗೆ ಇಲಾಖೆಯಿಂದ ರಸ್ತೆ ಸುರಕ್ಷತೆ ಮತ್ತು ಪ್ರವರ್ತನ ಚಟುವಟಿಕೆಯನ್ನು ಚುರುಕುಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಚನೆಗಳನ್ನು ನೀಡಿವೆ. ಜನಸ್ನೇಹಿ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು ಎಂದು ತಿಳಿಸಿವೆ. ಅದಕ್ಕೆ ಅನುಗುಣವಾಗಿ ಕೆಲಸ ಮಾಡಲು ವಾಹನ ಖರೀದಿಸಲಾಗಿದೆ ಎಂದರು.
ಸುಪ್ರೀಂಕೋರ್ಟ್ ಆದೇಶದ ಮೇರೆಗೆ ರಚನೆಯಾಗಿರುವ ರಸ್ತೆ ಸುರಕ್ಷತಾ ಸಮಿತಿಯು ನೀಡಿರುವ ಸೂಚನೆಯಂತೆ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಸುರಕ್ಷತಾ ಮಾನದಂಡಗಳನ್ನು ಅಳವಡಿಸಿಕೊಳ್ಳದ ವಾಹನಗಳಿಗೆ ದಂಡ ಹಾಕಬೇಕು. ಚಾಲಕರು, ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾತ್ರಿ ಸಂಚಾರದ ವೇಳೆ ಟೈಲ್ ಲ್ಯಾಂಪ್, ಇಂಡಿಕೇಟರ್‌ಗಳು ಸುಸ್ಥಿತಿಯಲ್ಲಿ ಇವೆಯೇ ಎಂದು ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.
ಪೊಲೀಸ್, ಆರೋಗ್ಯ, ಲೋಕೋಪಯೋಗಿ, ಶಿಕ್ಷಣ ಇಲಾಖೆಯ ಸಹಯೋಗ ಪಡೆದುಕೊಂಡು ರಸ್ತೆ ಸುರಕ್ಷತಾ ಪ್ರಾಧಿಕಾರವು ಹೆಚ್ಚು ಅಪಘಾತ ಉಂಟಾಗುವ ಸ್ಥಳಗಳನ್ನು ಗುರುತಿಸಬೇಕು. ಅಪಘಾತ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು. ಹೆಲ್ಮೆಟ್ ಧರಿಸದೇ ದ್ವಿಚಕ್ರವಾಹನ ಚಾಲನೆ, ಮದ್ಯಪಾನ ಮಾಡಿ ವಾಹನ ಚಾಲನೆ, ಸೀಟ್ ಬೆಲ್ಟ್ ಧರಿಸದಿರುವುದು ಮುಂತಾದವುಗಳನ್ನು ನಿಯಂತ್ರಿಸಬೇಕು ಎಂದು ಹೇಳಿದರು.
2024-25ರ ಅವಧಿಯಲ್ಲಿ ಒಟ್ಟು 4,01,595 ಪ್ರಕರಣಗಳು ದಾಖಲಾಗಿದ್ದು ವಿವಿಧ ಅಪರಾಧಗಳಿಗೆ ಒಟ್ಟು 197.50 ಕೋಟಿ ರೂ. ದಂಡವನ್ನು ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ಇದೇ ವೇಳೆ ಮಾಹಿತಿ ನೀಡಿದರು.