ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆಡಳಿತಾರೂಢ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಆರೋಪಿಸಿದ್ದ ಬೆನ್ನಲ್ಲೆ, ಮತ್ತೋರ್ವ ಕಾಂಗ್ರೆಸ್ ಶಾಸಕ ರಾಜು ಕಾಗೆ, ತಮ್ಮದೇ ಸರ್ಕಾರದ ವಿರುದ್ಧ ಸಿಡಿದೆದಿದ್ದು, ರಾಜೀನಾಮೆಯ ಬೆದರಿಕೆ ಹಾಕಿದ್ದಾರೆ. ಬೆಳಗಾವಿಯ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಗವಾಡ ಶಾಸಕ ರಾಜು ಕಾಗೆ, ನಮ್ಮ ಸರ್ಕಾರದಲ್ಲಿ ಯಾವುದೇ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆಡಳಿತ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಬಿ.ಆರ್.ಪಾಟೀಲ್ ಹೇಳಿದ್ದು ಸುಳ್ಳಲ್ಲ, ನಿಜಾನೆ ಇದೆ. ಅವರು ಹೇಳಿದ ಅಪ್ಪನ ಹಾಗಾಗಿದೆ ನನ್ನ ಪರಿಸ್ಥಿತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 25 ಕೋಟಿ ಅನುದಾನ ನೀಡಿ 2 ವರ್ಷ ಕಳೆದರೂ ವರ್ಕ್ ಆರ್ಡರ್ ಇಲ್ಲ. ಎರಡು ವರ್ಷ ಕಳೆದರೂ ವರ್ಕ್ ಆರ್ಡರ್ ನೀಡುತ್ತಿಲ್ಲ ಅಂದ್ರೆ ಏನರ್ಥ? ಇದರಿಂದ ನನ್ನ ಮನಸ್ಸಿಗೆ ಸಾಕಷ್ಟು ನೋವಾಗಿದೆ. ನಾನು ಸಹ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿದೆ. ಎರಡು ದಿನದಲ್ಲಿ ಮುಖ್ಯಮಂತ್ರಿಗೆ ರಾಜೀನಾಮೆ ಕೊಟ್ಟರು ಆಶ್ಚರ್ಯವಿಲ್ಲ ಎಂದು ಹೇಳಿದ್ದಾರೆ.
ಹಲವು ಜನರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿರುವ ಐಶ್ವರ್ಯ ಗೌಡ ಎಂಬ ಮಹಿಳೆಯ ವಿರುದ್ಧದ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಂಸದ ಡಿ ಕೆ ಸುರೇಶ್ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ಇಂದು ವಿಚಾರಣೆಗೆ ಹಾಜರಾಗಿದ್ದರು. ಅದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸುರೇಶ್, ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ, ಆ ಮಹಿಳೆ ಹಾಗೂ ನಮ್ಮ ನಡುವೆ ಯಾವುದೇ ಹಣಕಾಸು ಹಾಗೂ ಇತರೇ ವಹಿವಾಟು ನಡೆದಿಲ್ಲ. ಅವರು ಮೂರ್ನಾಲ್ಕು ಬಾರಿ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಕೆಲವೊಂದು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ವಾಸ ಮಾಡುತ್ತಿದ್ದರು ಎನ್ನುವ ಕಾರಣಕ್ಕೆ ಅವರ ಆಯೋಜನೆಯ ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ಇದರ ಹೊರತಾಗಿ ಬೇರೇನೂ ಇಲ್ಲ ಎಂದು ಹೇಳಿದ್ದಾರೆ. ಈ ಮಧ್ಯೆ, "ಉನ್ನತ ಪ್ರೊಫೈಲ್" ರಾಜಕಾರಣಿಗಳ ಸಾಮೀಪ್ಯವನ್ನು ಹೇಳಿಕೊಂಡು ಹಲವಾರು ಜನರನ್ನು ಬೆದರಿಸುವ ಮೂಲಕ ವಂಚಿಸಿದ ಆರೋಪದ ಮೇಲೆ ಐಶ್ವರ್ಯ ಗೌಡ ವಿರುದ್ಧದ ಹಣ ಅಕ್ರಮ ವರ್ಗಾವಣೆ ತನಿಖೆಯ ಭಾಗವಾಗಿ ಸುಮಾರು 4 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ ಸೋಮವಾರ ತಿಳಿಸಿದೆ. ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಮತ್ತು ಇತರರ ವಿರುದ್ಧ ಶೋಧ ನಡೆಸಿದ ನಂತರ ಜಾರಿ ನಿರ್ದೇಶನಾಲಯ (ಇಡಿ) ಏಪ್ರಿಲ್ ಆರಂಭದಲ್ಲಿ 33 ವರ್ಷದ ಐಶ್ವರ್ಯಾ ಗೌಡ ಅವರನ್ನು ಬಂಧಿಸಿತ್ತು.
ಬೆಂಗಳೂರಿನಲ್ಲಿ ಅರಣ್ಯ ಭೂಮಿ ಒತ್ತುವರಿದಾರರಿಗೆ ಅರಣ್ಯ ಇಲಾಖೆ ಬಿಸಿ ಮುಟ್ಟಿಸಿದೆ. ಕಾಡುಗೋಡಿಯಲ್ಲಿ ಅರಣ್ಯ ಇಲಾಖೆ ಸೋಮವಾರ ಈ ಮಹತ್ವದ ಕಾರ್ಯಾಚರಣೆ ನಡೆಸಿ ಸುಮಾರು 4 ಸಾವಿರ ಕೋಟಿ ಮೌಲ್ಯದ ಜಮೀನನ್ನು ಮರು ವಶಕ್ಕೆ ಪಡೆದುಕೊಂಡಿದೆ. ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಸೂಚನೆ ಮೇರೆಗೆ ಬೆಂಗಳೂರು ಪೂರ್ವ ತಾಲೂಕು ಬಿದರಹಳ್ಳಿ ಹೋಬಳಿ, ಕಾಡುಗೋಡಿ ಪ್ಲಾಂಟೇಷನ್ ನ 120 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸುತ್ತಿರುವ ಅಧಿಕಾರಿಗಳು ಮರು ವಶಕ್ಕೆ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಬೆಂಗಳೂರು ವ್ಯಾಪಕವಾಗಿ ಬೆಳೆಯುತ್ತಿದ್ದು, ಹಸಿರು ಹೊದಿಕೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಹೀಗಾಗಿ ಶ್ವಾಸತಾಣಗಳ ಸಂರಕ್ಷಣೆ ಮಾಡಬೇಕು ಎಂದು ಸಚಿವರು ಸ್ಪಷ್ಟ ಸೂಚನೆ ನೀಡಿದ್ದರು.
ಅಂಗಡಿಗೆ ಹೊರಟಿದ್ದ ಯುವತಿಗೆ ಮೈ ಕೈ ಮುಟ್ಟಿ ಹಾಡಹಗಲೇ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಮೈಲಸಂದ್ರ ಬಳಿ ನಡೆದಿದೆ. ಭಾನುವಾರ ಸಂಜೆ 4 ಗಂಟೆ ವೇಳೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿ ಗಾಂಜಾ ನಶೆಯಲ್ಲಿದ್ದ ಐದಾರು ಮಂದಿ ಕೃತ್ಯ ಎಸಗಿದ್ದಾರೆ. ಅಲ್ಲದೇ ಪ್ರತಿರೋಧ ತೋರಿದ ಯುವತಿ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ. ಆಕೆ ಸ್ಥಳೀಯರ ನೆರವಿನಿಂದ ತಪ್ಪಿಸಿಕೊಂಡಿದ್ದಾಳೆ. ಈ ವೇಳೆ ಸ್ಥಳೀಯರ ಮೇಲೂ ಹಲ್ಲೆ ನಡೆಸಿದ ಕಿಡಿಗೇಡಿಗಳು ಯುವತಿಯ ಮನೆಗೆ ನುಗ್ಗಿ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಈ ಸಂಬಂಧ ನಿನ್ನೆ ಸಂಜೆಯೇ ದೂರು ನೀಡಿದ್ದರೂ ಪೊಲೀಸರು ಪ್ರಕರಣ ದಾಖಲಿಸಿಲ್ಲ, ಆರೋಪಿಗಳನ್ನು ವಶಕ್ಕೆ ಪಡೆಯುವ ಕೆಲಸವನ್ನೂ ಮಾಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.