ವಿಜಯನಗರ: ನಾನು ಸಹ ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಮಾಜಿ ಅಧ್ಯಕ್ಷ ಎಲ್.ಬಿ.ಪಿ.ಭೀಮಾ ನಾಯ್ಕ್ ಹೇಳಿದ್ದಾರೆ
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ರಾಯಚೂರು ಬಳ್ಳಾರಿ ಕೊಪ್ಪಳ ವಿಜಯನಗರ (ರಾಬಕೊವಿ) ಹಾಲು ಒಕ್ಕೂಟದ ಚುನಾವಣೆಯಲ್ಲಿ ನಾನು ಸಹ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲಿದ್ದೇನೆ. ಧಾರವಾಡ ಹೈಕೋರ್ಟ್ ಪೀಠ ಚುನಾವಣೆಗೆ ಇದ್ದ ತಡೆಯನ್ನು ತೆರವುಗೊಳಿಸಿದ ಕಾರಣ ಜುಲೈ 10ರಂದು ಈ ಚುನಾವಣೆ ನಡೆಯಲಿದೆ’ ಎಂದರು.
ಬಳ್ಳಾರಿಯಿಂದ ನಾನು ಕೆಎಂಎಫ್ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ. ಆದರೆ ಇದರ ಬಗ್ದೆ ಅಂತಿಮವಾಗಿ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದು ಅವರು ಹೇಳಿದರು, ಆ ಮೂಲಕ ಡಿ.ಕೆ ಸುರೇಶ್ ಗೆ ನೇರ ಸ್ಪರ್ಧೆ ಒಡ್ಡುವ ಸುಳಿವು ನೀಡಿದ್ದಾರೆ.
ವಿಜಯನಗರ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಿರಾಜ್ ಶೇಖ್ ಅವರನ್ನು ನಾನು ಒಪ್ಪಿಕೊಂಡೇ ಇಲ್ಲ. ಅವರು ಯಾರು? ಪಕ್ಷ ವಿರೋಧಿ ಚಟುವಟಿಕೆ ನಡೆಸುವ ಅವರಿಗೆ ನಾನು ಮಾಧ್ಯಮದ ಮುಂದೆ ಹೋಗಬಾರದು ಎಂದು ಹೇಳುವ ಯಾವುದೇ ನೈತಿಕತೆ ಇಲ್ಲಎಂದು ಭೀಮಾ ನಾಯ್ಕ್ ಹೇಳಿದರು.
ಹಗರಿ ಬೊಮ್ಮನಹಳ್ಳಿಯಿಂದ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ, ನಾಯಕ್ ರಾಜಕೀಯದಲ್ಲಿ ತಮ್ಮ ಪ್ರಾಬಲ್ಯ ಉಳಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಒಂದು ವೇಳೆ ಅವರು ಕೆಎಂಎಫ್ ಚುನಾವಣಾ ಕಣಕ್ಕೆ ಇಳಿದಿದ್ದೇ ಆದರೆ ಅದು ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ. ಕೆ ಶಿವಕುಮಾರ್ ನಡುವೆ ಮತ್ತೊಂದು ಸುತ್ತಿನ ಅಧಿಕಾರ ಹೋರಾಟಕ್ಕೆ ಕಾರಣವಾಗುತ್ತದೆ.