ಬೆಂಗಳೂರು: ಶಾಸಕರು ತಮಗೆ ನೀಡಲಾದ ಅನುದಾನದಿಂದ ಎಂದಿಗೂ ತೃಪ್ತರಾಗುವುದಿಲ್ಲ. ನಮ್ಮಲ್ಲಷ್ಟೇ ಅಲ್ಲ, ಎಲ್ಲಾ ಸರ್ಕಾರಗಳೂ ಈ ಸಮಸ್ಯೆಯನ್ನು ಎದುರಿಸುತ್ತವೆ ಎಂದು ಗೃಹ ಸಚಿವ ಪರಮೇಶ್ವರ್ ಅವರು ಬುಧವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರ ವಿರುದ್ಧ ಶಾಸಕರ ಅಸಮಾಧಾನ ಎಲ್ಲಾ ಸರ್ಕಾರಗಳಲ್ಲೂ ಸಾಮಾನ್ಯ. ಶಾಸಕರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದು ಕಷ್ಟಸಾಧ್ಯ. ಹಾಗಾಗಿ ಸಣ್ಣಪುಟ್ಟ ಸಮಸ್ಯೆಗಳು ಇದ್ದೇ ಇರುತ್ತವೆ. ಮುಖ್ಯಮಂತ್ರಿಗಳು ಶಾಸಕರ ಜೊತೆ ಚರ್ಚೆ ಮಾಡಿ ಬಗೆಹರಿಸುತ್ತಾರೆ ಎಂದು ಹೇಳಿದರು.
ಈ ಮೊದಲು ಶಾಸಕಾಂಗ ಸಭೆಯಲ್ಲಿ ತಮ ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಶಾಸಕರಿಗೆ ಅವಕಾಶ ನೀಡಲಾಗಿತ್ತು. ಸಾಕಷ್ಟು ಚರ್ಚೆಗಳೂ ಆಗಿವೆ. ಇದೆಲ್ಲಾ ಸಣ್ಣಪುಟ್ಟ ಸಮಸ್ಯೆ, ಬಗೆಹರಿಯುತ್ತದೆ. ಹೈಕಮಾಂಡ್ ಮುಖ್ಯಮಂತ್ರಿಯವರಿಗೆ ಯಾವ ರೀತಿಯ ಸೂಚನೆ ನೀಡಿದೆಯೋ ಗೊತ್ತಿಲ್ಲ. ಒಂದು ವೇಳೆ ಸೂಚನೆ ನೀಡಿದ್ದರೆ ಅದರಂತೆ ನಡೆದುಕೊಳ್ಳುತ್ತಾರೆಂದು ತಿಳಿಸಿದರು.
ಶಾಸಕರು ತಮ ಕ್ಷೇತ್ರದ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಅದು ರಾಜ್ಯದ ಸಮಸ್ಯೆ ಅಲ್ಲ. ಕ್ಷೇತ್ರದ ಅಭಿವೃದ್ಧಿಗೆ ಪ್ರತಿಯೊಂದಕ್ಕೂ ತಲಾ 50 ಕೋಟಿ ರೂ.ಗಳ ಅನುದಾನ ನೀಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಎಲ್ಲಾ ಸಮಸ್ಯೆಗಳು ಇತ್ಯರ್ಥವಾಗುತ್ತವೆ ಎಂದರು.
ಬಾದಾಮಿ ಅಭಿವೃದ್ಧಿ ಹಾಗೂ ಗುಹೆಗಳ ರಕ್ಷಣೆಗೆ 1000 ಕೋಟಿ ಪ್ರಸ್ತಾವನೆ ರೆಡಿ ಮಾಡಿ ಕೇಂದ್ರಕ್ಕೆ ಕಳಿಸಿ ಅಂದೆ. ಅಷ್ಟೊಂದು ದುಡ್ಡು ನಾವು ಕೊಡಲು ಆಗೋದಿಲ್ಲ, ಆ ಪ್ರಸ್ತಾವನೆ ಕೇಂದ್ರಕ್ಕೆ ಕಳಿಸಿ ಅಂದಿದ್ದೆ, ಕೇಂದ್ರವೂ ಕೊಟ್ಟರೆ ಅನುಕೂಲ ಆಗುತ್ತೆ ಅಂದಿದ್ದೆ. ಇಷ್ಟೇ ಹೇಳಿದ್ದು, ದುಡ್ಡೇ ಇಲ್ಲ ಅಂತ ನಾನೆಲ್ಲಿ ಹೇಳಿದ್ದೇನೆ? ಎಂದು ಪ್ರಶ್ನಿಸಿದರು.
ಬಿಜೆಪಿ ತುರ್ತುಪರಿಸ್ಥಿತಿ ಕರಾಳ ದಿನಾಚರಣೆ ವಿಚಾರಕ್ಕೆ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ಹೇರಿ 50 ವರ್ಷ ಆಗಿ ಹೋಗಿದೆ. ತುರ್ತು ಪರಿಸ್ಥಿತಿ ಇತಿಹಾಸ ಪುಟ ಸೇರಿದೆ. ಬಿಜೆಪಿಯವರು ಜೀವಂತ ಇಡಲು ನೋಡುತ್ತಿದ್ದಾರೆ. 50 ವರ್ಷ ಆದರೂ ಆಚರಣೆ ಮಾಡ್ತಿದ್ದಾರೆ. ಇದರ ಹಿಂದಿನ ರಾಜಕೀಯ ದುರುದ್ದೇಶ ಏನು?. ನಾವು ಮುಂದಕ್ಕೆ ಹೋಗಬೇಕು, ಹಿಂದೆ ಅಲ್ಲ. ಮೋದಿಯವರೇ ಭವಿಷ್ಯದತ್ತ ಹೋಗೋಣ ಅಂತಾರೆ. ಯಾಕೆ ಇವರು ಹಿಂದಕ್ಕೆ ಹೋಗ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.