ಸಂಗ್ರಹ ಚಿತ್ರ 
ರಾಜ್ಯ

ಮಂಗಳೂರು ಗುಂಪು ಹತ್ಯೆ ಪ್ರಕರಣ: ಸತ್ಯಶೋಧನಾ ವರದಿ ಬಿಡುಗಡೆ, ನಿಷ್ಪಕ್ಷಪಾತ ತನಿಖೆಯಲ್ಲಿ ಸರ್ಕಾರ ವಿಫಲ!

2025ರ ಏಪ್ರಿಲ್ 27ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕೇರಳ ಮೂಲದ, ಪ್ಲಾಸ್ಟಿಕ್ ಬಾಟಲಿಗಳನ್ನು ಆಯುವ ಮುಸ್ಲಿಂ ಯುವಕ ಅಶ್ರಫ್‌ನನ್ನು ಕ್ರಿಕೆಟ್ ಆಡುತ್ತಿದ್ದವರ ಗುಂಪು ಅಮಾನುಷವಾಗಿ ಥಳಿಸಿ ಕೊಂದಿತು.

ಬೆಂಗಳೂರು: ಮಂಗಳೂರು ನಗರದ ಕುಡುಪುವಿನಲ್ಲಿ 2025ರ ಏಪ್ರಿಲ್ 27ರಂದು ನಡೆದಿದ್ದ ಕೇರಳದ ಮುಸ್ಲಿಂ ಯುವಕ ಅಶ್ರಫ್ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರರ ತಂಡವು ನಡೆಸಿದ ಸತ್ಯಶೋಧನಾ ವರದಿಯನ್ನು ಶನಿವಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗಿದ್ದು, ವರದಿಯಲ್ಲಿ ನಿಷ್ಪಕ್ಷಪಾತ ತನಿಖೆಯಲ್ಲಿ ಸರ್ಕಾರ ವಿಫಲ ಎಂದು ತಿಳಿಸಲಾಗಿದೆ.

‘ಮಂಗಳೂರು ಗುಂಪು ಹತ್ಯೆ ಪ್ರಕರಣ – ಸಂವಿಧಾನದ ಕಗ್ಗೊಲೆಯ ಬಗ್ಗೆ ಮೌನ ಮುರಿಯಬೇಕಿದೆ’ ಹೆಸರಿನಲ್ಲಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಕರ್ನಾಟಕ, ಅಸೋಸಿಯೇಷನ್‌ ಆಫ್ ಪ್ರೊಟೆಕ್ಷನ್ ಫಾರ್ ಸಿವಿಲ್ ರೈಟ್ಸ್ ಕರ್ನಾಟಕ, ಆಲ್ ಇಂಡಿಯಾ ಅಸೋಸಿಯೇಷನ್ ಫಾರ್ ಜಸ್ಟಿಸ್ ಕರ್ನಾಟಕ ಜಂಟಿಯಾಗಿ ನಡೆಸಿದ ಸತ್ಯಶೋಧನಾ ವರದಿಯನ್ನು ಪ್ರೆಸ್ ಕ್ಲಬ್‌ನಲ್ಲಿ ಬಿಡುಗಡೆ ಮಾಡಿದ್ದು, ಹಲವಾರು ಸಂಗತಿಗಳ ಬಗ್ಗೆ ಬೆಳಕು ಚೆಲ್ಲಿದೆ.

ಸತ್ಯಶೋಧನಾ ವರದಿಯ ಬಿಡುಗಡೆಯ ವೇಳೆ ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡ ಮಾವಳ್ಳಿ ಶಂಕರ್, ವಿಶ್ವಸಂಸ್ಥೆಯ ತಜ್ಞೆ ಅಶ್ವಿನಿ ಕೆ ಪಿ, ವಕೀಲರಾದ ವಿನಯ್ ಶ್ರೀನಿವಾಸ್, ಮೈತ್ರೇಯಿ, ಮಾನವಿ, ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ (ಎಸ್‌ಐಓ) ರಾಜ್ಯ ಕಾರ್ಯದರ್ಶಿ ಹಯಾನ್ ಕುದ್ರೋಳಿ, ಸತ್ಯಶೋಧನಾ ಸಮಿತಿಯ ಸದಸ್ಯ ಪಿಯುಸಿಎಲ್‌ನ ಶಶಾಂಕ್ ಹಾಗೂ ಗುಂಪು ಹತ್ಯೆಯ ಸಂತ್ರಸ್ತ ಯುವಕ ಕೇರಳ ಅಶ್ರಫ್ ಅವರ ಸಹೋದರ ಅಬ್ದುಲ್ ಜಬ್ಬಾರ್ ಉಪಸ್ಥಿತರಿದ್ದರು.

2025ರ ಏಪ್ರಿಲ್ 27ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕೇರಳ ಮೂಲದ, ಪ್ಲಾಸ್ಟಿಕ್ ಬಾಟಲಿಗಳನ್ನು ಆಯುವ ಮುಸ್ಲಿಂ ಯುವಕ ಅಶ್ರಫ್‌ನನ್ನು ಕ್ರಿಕೆಟ್ ಆಡುತ್ತಿದ್ದವರ ಗುಂಪು ಅಮಾನುಷವಾಗಿ ಥಳಿಸಿ ಕೊಂದಿತು. ಆ ಘಟನೆಯಿಂದಾಗಿ ಕರ್ನಾಟಕ ತಲೆತಗ್ಗಿಸುವಂತಾಗಿ ಎರಡು ತಿಂಗಳುಗಳೇ ಉರುಳಿದೆ. ಆದರೆ, ಕರ್ನಾಟಕ ರಾಜ್ಯ ಸರ್ಕಾರವು ಸದರಿ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರನ್ನು (ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್) ಅನ್ನು ಈವರೆಗೂ ನೇಮಿಸಿಲ್ಲ. ಮೃತ ಅಶ್ರಫ್ ಅವರ ಕುಟುಂಬಕ್ಕೆ ಮರಣೋತ್ತರ ಪರೀಕ್ಷೆಯ ವರದಿಯನ್ನೂ ನೀಡಿಲ್ಲ. ಅಲ್ಲದೇ, ಸಂತ್ರಸ್ತರಿಗೆ ನೀಡಬೇಕಾದ ಪರಿಹಾರವನ್ನು ಒದಗಿಸಿಲ್ಲ. ಇವೆಲ್ಲವೂ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂಬ ಅಂಶಗಳನ್ನೆಲ್ಲ ಉಲ್ಲೇಖಿಸಿದೆ.

ಇನ್ನು ಈ ಘಟನೆಗೆ ಸಂಬಂಧಿಸಿ ಪೊಲೀಸ್ ವೈಫಲ್ಯವನ್ನು ಸಂಪೂರ್ಣವಾಗಿ ಬಯಲಿಗೆಳೆದಿರುವ ಸತ್ಯಶೋಧನಾ ವರದಿಯು, ಗುಂಪು ಹತ್ಯೆ ಘಟನೆ ನಡೆದೇ ಇಲ್ಲ ಎಂಬಂತೆ ಬಿಂಬಿಸಲು ವ್ಯವಸ್ಥಿತವಾಗಿ ಷಡ್ಯಂತ್ರ ರೂಪಿಸಲಾಗಿತ್ತು ಎಂದು ತಿಳಿಸಿದೆ.

ಈವರೆಗೂ ಅಶ್ರಫ್ ಕುಟುಂಬಕ್ಕೆ ಮರಣೋತ್ತರ ಪರೀಕ್ಷಾ ವರದಿಯ ಪ್ರತಿಗಳನ್ನು ನೀಡಲಾಗಿಲ್ಲ. ಘಟನೆಯ ಸಂದರ್ಭದಲ್ಲಿ ಮಂಗಳೂರು ನಗರದ ಪೊಲೀಸ್ ಕಮಿಷನರ್ ಆಗಿದ್ದ ಅನುಪಮ್ ಅಗರ್ವಾಲ್, ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಸಿದ್ಧಾರ್ಥ ಗೋಯಲ್ ಅಮಾನತುಗೊಂಡ ಇನ್ಸ್‌ಪೆಕ್ಟ‌ರ್ ಜೊತೆಗೇ ಘಟನೆ ನಡೆದ ಸ್ಥಳದಲ್ಲಿದ್ದರು. ಹೀಗಿರುವಾಗ, ಹಿರಿಯ ಅಧಿಕಾರಿಗಳಿಗೆ ಗುಂಪು ಹತ್ಯೆಯ ಬಗ್ಗೆ ತಿಳಿದಿರಲಿಲ್ಲ ಎಂಬ ಪೊಲೀಸರ ಹೇಳಿಕೆ ಅನುಮಾನಾಸ್ಪದವಾಗಿದೆ.

ಹಿರಿಯ ಅಧಿಕಾರಿಗಳು ಘಟನೆ ನಡೆದ ಸ್ಥಳದಲ್ಲಿದ್ದರೂ ಕೂಡಾ ಕೆಳ ಹಂತದ ಅಧಿಕಾರಿಗಳು ಮಾಹಿತಿ ನೀಡಲಿಲ್ಲ ಎಂಬುದು ಪೊಲೀಸ್ ವ್ಯವಸ್ಥೆಯಲ್ಲಿ ಹೊಣೆಗಾರಿಕೆ ಯಾರದ್ದು ಎಂಬ ಪ್ರಶ್ನೆಯನ್ನು ಎತ್ತುತ್ತದೆ. ಮಾತ್ರವಲ್ಲ, ಪೊಲೀಸ್ ಕಮಿಷನರ್ ಅವರನ್ನು ಬಚಾವು ಮಾಡಲು ಪ್ರಯತ್ನಗಳು ನಡೆದಿವೆಯೇ ಎಂಬ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ತಿಳಿಸಿದೆ.

ಪೊಲೀಸ್ ಆಯುಕ್ತರು ಘಟನಾ ಸ್ಥಳದಲ್ಲಿದ್ದರೂ ತಕ್ಷಣವೇ ಎಫ್.ಐ.ಆರ್ ದಾಖಲಿಸಲು ವಿಫಲರಾಗಿರುವುದು ಪೊಲೀಸ್ ಉನ್ನತಾಧಿಕರಿಗಳ ಕರ್ತವ್ಯ ಲೋಪವನ್ನು ತೋರುತ್ತದೆ. ಅಲ್ಲದೇ ಈ ಘಟನೆಯಲ್ಲಿ ಅವರೂ ಕೈಜೋಡಿಸಿದ್ದಾರೆಯೇ ಎಂಬ ಸಂಶಯಗಳನ್ನು ಸೃಷ್ಟಿಸಿದೆ. ಅಲ್ಲದೇ, ಏಪ್ರಿಲ್ 28 ರ ತಡರಾತ್ರಿ ಮಂಗಳೂರು ಪೊಲೀಸ್ ಆಯುಕ್ತರು ಮಾಧ್ಯಮಗಳಿಗೆ ಹೇಳಿಕೆ ನೀಡಿ ವದಂತಿಗಳನ್ನು ಹರಡದಂತೆ ಮನವಿ ಮಾಡಿದ್ದಲ್ಲದೇ, ಮೃತದೇಹ ಯಾರದ್ದೆಂದು ತಮಗೆ ತಿಳಿದಿಲ್ಲ ಎಂದು ಮಾಹಿತಿ ನೀಡಿದ್ದರು.

ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಗುಂಪು ಹತ್ಯೆಯನ್ನು ಖಚಿತಪಡಿಸುತ್ತಾರೆ. ಬಳಿಕ ವ್ಯಕ್ತಿಯೊಬ್ಬ ಕ್ರಿಕೆಟ್ ಪಂದ್ಯದ ವೇಳೆ “ಪಾಕಿಸ್ತಾನ್ ಜಿಂದಾಬಾದ್” ಎಂದು ಕೂಗಿದ್ದರಿಂದ ಗುಂಪಿನಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದಾನೆ ಎಂದೂ ಇದಕ್ಕೆ ಸಂಬಂಧಿಸಿದಂತೆ 10-12 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದರು. ಗೃಹ ಸಚಿವರಿಗೆ ಈ ರೀತಿಯಲ್ಲಿ ಹೇಳಿಕೆ ನೀಡಲು ಮಾಹಿತಿ ನೀಡಿದ್ದು, ಯಾರು ಎಂಬುದನ್ನು ಕೂಡ ಸತ್ಯಶೋಧನಾ ವರದಿ ಪ್ರಶ್ನಿಸಿದೆ.

ಸುಪ್ರೀಂ ಕೋರ್ಟ್‌ ತಹಸೀನ್ ಎಸ್. ಪೂನಾವಾಲಾ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದ ತೀರ್ಪನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಮತ್ತು ಅದರ ಅಡಿಯಲ್ಲಿ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆ, ಸಂತ್ರಸ್ತರಿಗೆ ಪರಿಹಾರ ಮತ್ತು ಶಿಕ್ಷೆಯ ಕ್ರಮಗಳನ್ನು ತಕ್ಷಣವೇ ಜಾರಿಗೊಳಿಸಬೇಕು. ಅಶ್ರಫ್ ಗುಂಪು ಹತ್ಯೆ ಪ್ರಕರಣದ ತನಿಖೆಯನ್ನು ತಕ್ಷಣವೇ ಸಿ.ಐ.ಡಿಗೆ ವರ್ಗಾಯಿಸಬೇಕು ಎಂದು ಸತ್ಯಶೋಧನಾ ವರದಿಯು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಗದ್ದುಗೆ ಗುದ್ದಾಟ: 'ಹೈಕಮಾಂಡ್' ನತ್ತ ಎಲ್ಲರ ಚಿತ್ತ, ಮುಂದೇನು?

ಕೇರಳ: ರೂ. 50 ಲಕ್ಷ ಮೌಲ್ಯದ 'ಐಷಾರಾಮಿ ಬೈಕ್' ಬೇಕೆಂದು ಗಲಾಟೆ, ತಂದೆಯಿಂದ ಹಲ್ಲೆಗೊಳಗಾದ ಯುವಕ ಸಾವು!

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

SCROLL FOR NEXT